ಇಡಿಯಿಂದ ಮಂಜುನಾಥ್ ಗೌಡರ 13.91 ಕೋಟಿ ಆಸ್ತಿ ಜಪ್ತಿ

Kranti Deepa
ಬೆಂಗಳೂರು,ಜೂ.06 : ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ ನಗರ ಶಾಖೆ ಯಲ್ಲಿ  ಆದ ಹಗರಣ ಸಂಬಂಧ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ ಅವರ ಹಾಗೂ ಅವರ ಪತ್ನಿಗೆ ಸೇರಿದಂತಹ 13.91 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ.
ಈ ಕುರಿತಂತೆ ಎಕ್ಸ್‌ನಲ್ಲಿ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಇಡಿಯು, ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕಿನಿಂದ ಹಣವನ್ನು ವಂಚಿಸಿದ ಪ್ರಕರಣದಲ್ಲಿ, ಶಿವಮೊಗ್ಗ ಡಿಸಿಸಿ ಬ್ಯಾಂಕಿನ ಹಾಲಿ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ ಮತ್ತು ಅವರ ಪತ್ನಿಗೆ ಸೇರಿದ ಪ್ರಸ್ತುತ ಮಾರುಕಟ್ಟೆ ಮೌಲ್ಯದ ರೂ. 13.91  ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಇಡಿ, ಬೆಂಗಳೂರು ವಲಯ ಕಚೇರಿಯು ಪಿಎಂಎಲ್‌ಎ, 2002 ರ ನಿಬಂಧನೆಗಳ ಅಡಿಯಲ್ಲಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತಿಳಿಸಿದೆ.
ಕಳೆದ 2014 ರಲ್ಲಿ  ಡಿಸಿಸಿ ಬ್ಯಾಂಕ್‌ನ ನಗರ ಶಾಖೆಯಲ್ಲಿ  ನಕಲಿ ಚಿನ್ನ ಅಡಮಾನ ಸಾಲ ಪ್ರಕರಣದಲ್ಲಿ   64 ಕೋಟಿ ರೂ. ಅವ್ಯವಹಾರವಾಗಿತ್ತು. ಆ ಸಂದರ್ಭದಲ್ಲಿ ಸಿಐಡಿ ಪೋಲಿಸರು ಮಂಜುನಾಥ್ ಗೌಡರನ್ನು ಬಂಧಿಸಿದ್ದರು.ಹಲವು ತಿಂಗಳುಗಳ ನಂತರ ಬಿಡುಗಡೆಯಾಗಿದ್ದರು.ಸಹಕಾರ ಇಲಾಖೆಗಳಿಂದ ವಿವಿಧ ಆಯಾಮಗಳಲ್ಲಿ  ಪ್ರಕರಣ ಕುರಿತು ತನಿಖೆ ನಡೆದಿತ್ತು.
ನಕಲಿ ಬಂಗಾರ ಅಡಮಾನ ಪ್ರಕರಣ ಸಂಬಂಧ ಏಪ್ರಿಲ್ 8 ರಂದು ಶಿವಮೊಗ್ಗ ಮತ್ತು ಬೆಂಗಳೂರಿನ ವಿವಿಧೆಡೆ ಜಾರಿ ನಿರ್ದೇಶನಾಲಯದ ಅಕಾರಿಗಳು ದಾಳಿ ನಡೆಸಿದ್ದರು.
ಈ ಸಂದರ್ಭ ಡಿಜಿಟಲ್ ಸಾಕ್ಷಿ ಸೇರಿದಂತೆ ವಿವಿಧ ಸಾಕ್ಷಿ ಲಭ್ಯವಾಗಿತ್ತು. ಅಲ್ಲದೆ 2.5  ಕೆ.ಜಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿತ್ತು. ಏಪ್ರಿಲ್ 9 ರಂದು ಮಂಜುನಾಥ ಗೌಡ ಅವರನ್ನು ಇ.ಡಿ. ಅಕಾರಿಗಳು ಬಂಸಿದ್ದರು. ಸದ್ಯ ಮಂಜುನಾಥ ಗೌಡ ನ್ಯಾಯಾಂಗ ಬಂಧನ ದಲ್ಲಿದ್ದಾರೆ.

Share This Article
";