ಚನ್ನಗಿರಿ : ನೀರಿಗಾಗಿ ಅಲೆದಾಡಿದ ಕಾಡಾನೆ

Kranti Deepa
ಚನ್ನಗಿರಿ,ಮೇ,15 : ತಾಲೂಕಿನ ಉಬ್ರಾಣಿ ಹೋಬಳಿ ಅರಣ್ಯ ಪ್ರದೇಶದಲ್ಲಿ ತೀವ್ರ ಬರದ ಪರಿಣಾಮ ವನ್ಯಜೀವಿಗಳು ನೀರು ಮತ್ತು ಮೇವು ಅರಸಿ ಗ್ರಾಮಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಇದೀಗ ಕಾಡಾನೆಯೊಂದು ರಸ್ತೆ ಪಕ್ಕದ ಹೊಂಡದಲ್ಲಿ ಕೆಸರಿನಲ್ಲಿ ಮಿಂದೆದ್ದು ನೀರಾಟವಾಡುತ್ತಿರುವ ದೃಶ್ಯ ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ.
ಉಬ್ರಾಣಿ – ಭದ್ರಾವತಿ ಮಾರ್ಗದ ಉಬ್ರಾಣಿ ಚೆಕ್‌ಪೋಸ್ಟ್‌ನಿಂದ ಸುಮಾರು 200 ಮೀಟರ್ ದೂರದಲ್ಲಿರುವ ರಸ್ತೆ ಪಕ್ಕದ ಹೊಂಡದಲ್ಲಿ ಸ್ವಲ್ಪ ಪ್ರಮಾಣದ ನೀರು ಸಂಗ್ರಹವಾಗಿದ್ದು, ಬಿಸಿಲಿನ ತಾಪದಿಂದ ಬಳಲುತ್ತಿದ್ದ ಕಾಡಾನೆ ಆ ನೀರಿನಲ್ಲಿ ಇಳಿದು ಕೆಸರನ್ನು ದೇಹಕ್ಕೆ ಎರಚಿಕೊಳ್ಳುತ್ತಾ ಆಟವಾಡುತ್ತಿರುವ ದೃಶ್ಯ ಕಂಡು ಬಂದಿದೆ. ಈ ದೃಶ್ಯವನ್ನು ರಸ್ತೆ ಮೂಲಕ ಸಂಚರಿಸುತ್ತಿದ್ದ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ  ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣ ಗಳಲ್ಲೂ ವ್ಯಾಪಕವಾಗಿ ಹರಿದಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಉಬ್ರಾಣಿ ಭಾಗದ ಅರಣ್ಯ ಪ್ರದೇಶ ದಲ್ಲಿ ಮಳೆಯ ಅಭಾವ ತೀವ್ರವಾಗಿದ್ದು, ಕಾಡಿನೊಳಗಿನ ಕೆರೆ, ಹೊಂಡ ಹಾಗೂ ಜಲಮೂಲಗಳು ಒಣಗುತ್ತಿರುವ ಹಿನ್ನೆಲೆ ಕಾಡುಪ್ರಾಣಿಗಳು ನೀರು ಮತ್ತು ಆಹಾರಕ್ಕಾಗಿ ಗ್ರಾಮಗಳತ್ತ ಮುಖ ಮಾಡುತ್ತಿರುವುದು ಕಂಡುಬರುತ್ತಿದೆ. ವಿಶೇಷವಾಗಿ ಕಾಡಾನೆಗಳು, ಜಿಂಕೆಗಳು ಹಾಗೂ ಇತರ ವನ್ಯಜೀವಿಗಳು ರಸ್ತೆ ಹಾಗೂ ಗ್ರಾಮಗಳ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಹಗಲಿನ ವೇಳೆಯಲ್ಲೇ ರಸ್ತೆ ಪಕ್ಕದಲ್ಲಿ ದೈತ್ಯಾಕಾರದ ಕಾಡಾನೆ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ವಾಹನ ಸವಾರರು ಹಾಗೂ ಗ್ರಾಮಸ್ಥರು ಕೆಲಕಾಲ ಎಚ್ಚರಿಕೆಯಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿ ದ್ದಾರೆ. ಅರಣ್ಯ ಇಲಾಖೆಯವರು ಕಾಡಿನೊಳಗೆ ಶಾಶ್ವತ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸಿ, ಕುಡಿಯುವ ನೀರು ಹಾಗೂ ಮೇವುಗಳ ಸಮರ್ಪಕ ವ್ಯವಸ್ಥೆ ಮಾಡಬೇಕು.
ಬೇಸಿಗೆ ಅವಯಲ್ಲಿ ತಾತ್ಕಾಲಿಕ ನೀರಿನ ಟ್ಯಾಂಕ್, ಕೃತಕ ಕೆರೆ ಹಾಗೂ ಮೇವು ಕೇಂದ್ರಗಳನ್ನು ನಿರ್ಮಿಸುವ ಮೂಲಕ ವನ್ಯಜೀವಿಗಳನ್ನು ಕಾಡಿನೊಳಗೇ ಉಳಿಸಬಹುದು ಎಂದು ಉಬ್ರಾಣಿ ಗ್ರಾಮದ ಗ್ರಾಮಸ್ಥರ ಒಕ್ಕೂರಲಿನ ಒತ್ತಾಯವಾಗಿದೆ.ಕಾಡಿನ ಪ್ರಾಣಿಗಳಿಗೆ ಕಾಡಿನಲ್ಲೇ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಿದರೆ ಅವು ಗ್ರಾಮಗಳಿಗೆ ಹಾಗೂ ರಸ್ತೆಗಳಿಗೆ ಬರುವುದನ್ನು ತಪ್ಪಿಸಬಹುದು.

Share This Article
";