ಶಿವಮೊಗ್ಗ, ಜೂನ್.18 : ರಾಜ್ಯದಾದ್ಯಂತ ಸಂಚಾರಿ ಪೊಲೀಸರಿಂದ ಹಾಕಲ್ಪಟ್ಟ ದಂಡವನ್ನು ಕಟ್ಟಲು ಶೇ. 50 ರಷ್ಟು ರಿಯಾಯಿಯಿಯನ್ನು ಸರ್ಕಾರ ಘೋಷಿಸಿದೆ.
ಬಾಕಿ ಇರುವ ದಂಡದ ಮೊತ್ತವನ್ನು ಪಾವತಿಸಲು ಶೇಕಡಾ 50 ರಷ್ಟು ವಿಶೇಷ ರಿಯಾಯಿತಿಯನ್ನು ಪ್ರಕಟಿಸಲಾಗಿದೆ.
ಗುರುವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಿ.ಸಿ. ಕೊಠಡಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ಜಿ.ಎ. ಪ್ರಸ್ತುತ ವಾಹನ ಸವಾರರ ಅನುಕೂಲಕ್ಕಾಗಿ ಒದಗಿಸಲಾಗುತ್ತಿರುವ ಈ ಅವಕಾಶದ ಬಗ್ಗೆ ವಿವರಿಸಿದರು.
2026 ರ ಮೇ ತಿಂಗಳಿಗಿಂತ ಮುಂಚಿತವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ದಾಖಲಾಗಿರುವ ಎಲ್ಲಾ ಇ-ಚಲನ್ ಪ್ರಕರಣಗಳ ದಂಡದ ಮೊತ್ತದ ಮೇಲೆ ಈ ಶೇಕಡಾ 50 ರಷ್ಟು ವಿನಾಯಿತಿಯನ್ನು ಒದಗಿಸಲಾಗಿದೆ. ಈ ವಿಶೇಷ ರಿಯಾಯಿತಿ ಯೋಜನೆಯು ಜೂನ್ 21, 2026 ರಿಂದ ಆರಂಭಗೊಂಡು ಜುಲೈ 10,2026 ರವರೆಗೆ ಒಟ್ಟು 20 ದಿನಗಳ ಕಾಲ ಮಾತ್ರ ಚಾಲ್ತಿಯಲ್ಲಿರುತ್ತದೆ. ಸಾರ್ವಜನಿಕರು ಈ ನಿಗದಿತ ಅವಧಿಯಲ್ಲಿ ರಿಯಾಯಿತಿ ದರದಲ್ಲಿ ದಂಡ ಪಾವತಿಸುವ ಮೂಲಕ ತಮ್ಮ ವಾಹನಗಳ ಮೇಲಿರುವ ಬಾಕಿ ಪ್ರಕರಣಗಳನ್ನು ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳಲು ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಇ-ಚಲನ್ ದಂಡ ಪಾವತಿಯ ಕುರಿತಾದ ಸಮಗ್ರ ಮಾಹಿತಿಯನ್ನು ಒಳಗೊಂಡ ಡಿಜಿಟಲ್ ಬ್ಯಾನರ್ ಅನ್ನು ಅವರು ಬಿಡುಗಡೆಗೊಳಿಸಿದರು.
ನಗರದ ವ್ಯಾಪ್ತಿಯಲ್ಲಿ ಆಗಸ್ಟ್ 28 , 2023 ರಿಂದ ಏಪ್ರಿಲ್30 , 2026 ರವರೆಗಿನ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನ ಐಟಿಎಂಎಸ್ ತಂತ್ರಜ್ಞಾನದ ಮೂಲಕ ಭಾರೀ ಪ್ರಮಾಣದಲ್ಲಿ ಇ-ಚಲನ್‌ಗಳು ದಾಖಲಾಗಿವೆ. ಈ ಅವಧಿಯಲ್ಲಿ ಒಟ್ಟಾರೆಯಾಗಿ 4,38,023 ಇ-ಚಲನ್ ಪ್ರಕರಣಗಳು ದಾಖಲಾಗಿದ್ದು, ಇವುಗಳ ಒಟ್ಟು ದಂಡದ ಮೊತ್ತವು 31,80,66,250 ರೂಪಾಯಿಗಳಷ್ಟಾಗಿದೆ ಎಂದು ವಿವರಿಸಿದರು.
ಈ ಪೈಕಿ ಈಗಾಗಲೇ 1,38,986 ಇ-ಚಲನ್‌ಗಳನ್ನು ಇತ್ಯರ್ಥಪಡಿಸಲಾಗಿದ್ದು, 6,09,47,900 ರೂಪಾಯಿಗಳ ದಂಡದ ಮೊತ್ತವನ್ನು ಯಶಸ್ವಿಯಾಗಿ ವಸೂಲಿ ಮಾಡಲಾಗಿದೆ. ಪ್ರಸ್ತುತ ಇನ್ನುಳಿದ 2,99,037 ಪ್ರಕರಣಗಳು ಬಾಕಿ ಉಳಿದುಕೊಂಡಿದ್ದು, ಇವುಗಳಿಂದ ಬರಬೇಕಾದ 23,71,18,350 ರೂಪಾಯಿಗಳ ದಂಡದ ಮೊತ್ತವು ವಸೂಲಾತಿಗೆ ಬಾಕಿ ಇದೆ ಎಂದರು.
ವಾಹನ ಸವಾರರು ತಮ್ಮ ವಾಹನಗಳ ಮೇಲಿರುವ ಬಾಕಿ ದಂಡದ ಸಂಪೂರ್ಣ ವಿವರಗಳನ್ನು ಆನ್‌ಲೈನ್ ವ್ಯವಸ್ಥೆಯ ಮೂಲಕ ಪಾವತಿಸಬಹುದಾಗಿದೆ. ನೆಕ್ಸ್ಟ್ ಜೆನ್ ಇ-ಚಲನ್ (NextGeneChallan ) ವೆಬ್ ಪೋರ್ಟಲ್ ಮೂಲಕ ಅಥವಾ ನೇರವಾಗಿ https://103.195.218.159/challan ಲಿಂಕ್ ಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ನೇರವಾಗಿ ದಂಡ ಪಾವತಿಸಲು ಇಚ್ಛಿಸುವವರಿಗಾಗಿ ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಚಂಡಿಕಾ ಪರಮೇಶ್ವರಿ ದೇವಸ್ಥಾನದ ಎದುರಿನ ಪೂರ್ವ ಸಂಚಾರ ಪೊಲೀಸ್ ಠಾಣೆ, ಸಾಗರ ರಸ್ತೆಯಲ್ಲಿರುವ ಪಶ್ಚಿಮ ಸಂಚಾರ ಪೊಲೀಸ್ ಠಾಣೆ, ಭದ್ರಾವತಿಯ ಉಂಬ್ಳೇಬೈಲು ರಸ್ತೆಯಲ್ಲಿರುವ ಭದ್ರಾವತಿ ಸಂಚಾರ ಪೊಲೀಸ್ ಠಾಣೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಇದಲ್ಲದೆ, ಕರ್ತವ್ಯ ನಿರತರಾಗಿರುವ ಶಿವಮೊಗ್ಗ ಸಂಚಾರ ಠಾಣೆಯ ಇ-ಚಲನ್ ಪಿಡಿಎ ಮಷೀನ್ ಹೊಂದಿರುವ ಎಎಸ್‌ಐ ಹಾಗೂ ಆ ಮೇಲ್ಪಟ್ಟ ದರ್ಜೆಯ ಪೊಲೀಸ್ ಅಧಿಕಾರಿಗಳ ಬಳಿಯೂ ದಂಡ ಪಾವತಿಸಬಹುದಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಪ್ರಮುಖ ವೃತ್ತಗಳಾದ ಅಶೋಕ ಸರ್ಕಲ್, ಶಿವಪ್ಪ ನಾಯಕ ಸರ್ಕಲ್, ಗೋಪಿ ಸರ್ಕಲ್ ಹಾಗೂ ಪೊಲೀಸ್ ಚೌಕಿ ಸರ್ಕಲ್‌ಗಳಲ್ಲಿರುವ ಪೊಲೀಸ್ ಕಿಯೋಸ್ಕ್ ಗಳಲ್ಲಿ ಬೆಳಗ್ಗೆ ೦೯ ಗಂಟೆಯಿಂದ ರಾತ್ರಿ ೦೯ ಗಂಟೆಯವರೆಗೆ ವಿಶೇಷ ಕೌಂಟರ್‌ಗಳು ಕಾರ್ಯನಿರ್ವಹಿಸಲಿವೆ ಎಂದು ವಿವರಿಸಿದರು.
