ಶಿವಮೊಗ್ಗ, ಜೂ.10 : ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಯುವಕರು ಅರಿವು ಹೊಂದಿ, ವ್ಯಸನದ ವಿರುದ್ಧ ದೃಢ ನಿಲುವು ತಾಳಿದಾಗ ಮಾತ್ರ ನಶೆಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್.ಸಂತೋಶ್ ಹೇಳಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ನಶಾ ಮುಕ್ತ ಭಾರತ ಮತ್ತು ಅಂಗದಾನ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾನು ಒಬ್ಬಂಟಿಯಾಗಿದ್ದಾಗ ಎಷ್ಟು ಶಿಸ್ತಿನಿಂದ ವರ್ತಿಸುತ್ತೇನೆ ಎಂಬುದೇ ನನ್ನ ವ್ಯಕ್ತಿತ್ವದ ನಿಜವಾದ ಮಾನದಂಡ. ವ್ಯಕ್ತಿಯ ಜೀವನವು ಅವನ ಚರಿತ್ರೆ ಮತ್ತು ನಡವಳಿಕೆ ಮೇಲೆ ಅವಲಂಬಿತವಾಗಿರುತ್ತದೆ.
ಹಿಂದೆ ಇಡೀ ಸಮಾಜವೇ ಮಕ್ಕಳ ಬೆಳವಣಿಗೆಯ ಮೇಲೆ ಕಣ್ಣಿಟ್ಟಿತ್ತು. ಆದರೆ ಇಂದು ಸಮಾಜದ ರಚನೆ ಮತ್ತು ಮಕ್ಕಳ ಮನಸ್ಥಿತಿ ಎರಡೂ ಬದಲಾಗಿವೆ. ಒಳ್ಳೆಯ ಮಾತುಗಳನ್ನು ಸ್ವೀಕರಿಸುವ ಸೌಜನ್ಯತೆ ಕಡಿಮೆಯಾಗುತ್ತಿದೆ. ಹಿರಿಯರನ್ನು ಗೌರವಿಸುವ ಸಂಸ್ಕಾರ ಕಣ್ಮರೆಯಾಗುತ್ತಿದೆ. ಡ್ರಗ್ಸ್‌ಗಳು ವ್ಯಕ್ತಿಯಲ್ಲಿ ಕ್ರೌರ್ಯ ಮತ್ತು ಅಮಾನವೀಯ ಪ್ರವೃತ್ತಿಗಳನ್ನು ಹೆಚ್ಚಿಸುತ್ತವೆ. ನಶೆಯ ಅಮಲಿನಲ್ಲಿ ನಡೆಯುವ ಅಪರಾಧಗಳಿಗೆ ಕಾನೂನು ಯಾವುದೇ ಕನಿಕರ ತೋರುವುದಿಲ್ಲ; ಅಂತಹವರನ್ನು ಮೊದಲು ಅಪರಾಧಿಗಳಾಗಿ ಪರಿಗಣಿಸಿ, ನಂತರ ಅಗತ್ಯವಿದ್ದಲ್ಲಿ ರೋಗಿಗಳಾಗಿ ನೋಡಲಾಗುತ್ತದೆ ಎಂದು ಎಚ್ಚರಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಯುವಜನತೆ ಇಂದು ಸರಿಯಾದ ಮಾರ್ಗದರ್ಶನ ಮತ್ತು ವಿವೇಚನೆಯ ಕೊರತೆಯಿಂದ ದಾರಿತಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ, ಮೌಲ್ಯಗಳು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಅಪಾರ ಸಾಮರ್ಥ್ಯ ಅಡಗಿದ್ದು, ಸಮಾಜದ ಅಭಿವೃದ್ಧಿಗಾಗಿ ಸಾಮರ್ಥ್ಯವನ್ನು ಸಮರ್ಪಿಸಿಕೊಳ್ಳಬೇಕಾಗಿದೆ.
ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ಸಾಮಾಜಿಕ ನಡವಳಿಕೆ, ಶಿಸ್ತುಬದ್ಧ ಜೀವನ ಹಾಗೂ ಭವಿಷ್ಯವನ್ನು ಹಾಳು ಮಾಡುತ್ತದೆ. ಕುತೂಹಲದಿಂದ ಆರಂಭವಾಗುವ ಮಾದಕ ವಸ್ತುಗಳ ಬಳಕೆ ಕ್ರಮೇಣ ವ್ಯಸನವಾಗಿ ರೂಪುಗೊಳ್ಳುತ್ತದೆ. ಒಮ್ಮೆ ವ್ಯಸನಕ್ಕೆ ಒಳಗಾದರೆ, ಸಾಮಾನ್ಯವಾಗಿ ವರ್ತಿಸಲು ಸಹ ಮಾದಕ ವಸ್ತುಗಳ ಅವಲಂಬನೆ ಅನಿವಾರ್ಯವಾಗುವ ದುರಂತ ಪರಿಸ್ಥಿತಿ ನಿರ್ಮಾಣವಾಗಲಿದೆ.
ಯುವ ಸಮೂಹ ಪೋಷಕರು, ಶಿಕ್ಷಕರು ಹಾಗೂ ಸಮಾಜ ತಮ್ಮ ಮೇಲೆ ಇಟ್ಟಿರುವ ನಂಬಿಕೆ, ನಿರೀಕ್ಷೆ ಮತ್ತು ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ವಿಶೇಷವಾಗಿ ಫಾರ್ಮಸಿ ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್ ಮಾತ್ರವಲ್ಲದೆ ಇತರೆ ಶಿಕ್ಷಣ ಸಂಸ್ಥೆಗಳು ಮತ್ತು ಸಮಾಜದಲ್ಲಿಯೂ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಿ, ನಶೆಮುಕ್ತ ವಾತಾವರಣ ನಿರ್ಮಾಣಕ್ಕೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಸೈಬರ್ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಮಂಜುನಾಥ, ಎನ್ ಯು ಆಸ್ಪತ್ರೆ ನೆಫ್ರಾಲಜಿಸ್ಟ್ ಡಾ.ಪ್ರವೀಣ್ ಮಳವಾಡೆ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ರೀಹರ್ಷಾ.ಎಸ್.ಎನ್ ಅಧ್ಯಕ್ಷತೆ ವಹಿಸಿದ್ದರು.
