ಶಿವಮೊಗ್ಗ, ಜೂ.24 : ನಗರದಲ್ಲಿರುವ ಜಿಲ್ಲಾ ಕಳೆದ ರಾತ್ರಿ ಸುಮಾರು 1.47 ರ ವೇಳೆಗೆ ಬಂದಿದ್ದ ಬಾಂಬ್ ಬೆದರಿಕೆಯ ಇ- ಮೇಲ್ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ನ್ಯಾಯಾಲಯದ ಸುತ್ತಮುತ್ತ ಬಾಂಬ್ ನಿಷ್ಕ್ರಿಯ ದಳದವರು ತಪಾಸಣೆ ನಡೆಸಿದರು. ಬಾಂಬ್ ಪತ್ತೆಯಾಗದ ಕಾರಣ ಇದೊಂದು ಹುಸಿ ಕರೆ ಎಂದು ಗೊತ್ತಾಯಿತು.
ನ್ಯಾಯಾಲಯಕ್ಕೆ ಅಜ್ಮಲ್ ಕಸಬ್ ಎಂಬಾತನ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಭದ್ರತಾ ಸಿಬ್ಬಂದಿ, ಶ್ವಾನದಳ ಹಾಗೂ ವಿಧ್ವಂಸಕ ಕೃತ್ಯಗಳ ವಿರೋಧಿ ತಪಾಸಣಾ ತಂಡದಿಂದ ವ್ಯಾಪಕ ತಪಾಸಣೆ ನಡೆಸಲಾಯಿತು.
ತುಕ್ಕು ಹಿಡಿದ ಮೊಳೆಗಳನ್ನು ಜೋಡಿಸಲಾದ 5 ಮಿನಿ ಗ್ಯಾಸ್ ಸಿಲಿಂಡರ್ ಬಾಂಬ್‌ಗಳು ಮಧ್ಯಾಹ್ನ 2.30 ಕ್ಕೆ ನಿಮ್ಮ ನ್ಯಾಯಾಲಯದಲ್ಲಿ ಸ್ಫೋಟಗೊಳ್ಳುತ್ತವೆ ಎಂದು ಇ ಮೇಲ್ ನಲ್ಲಿ ಉಲ್ಲೇಖಿಸಲಾಗಿತ್ತು. ಇದರನ್ವಯ ದೂರು ದಾಖಲಿಸಿ ರಕ್ಷಣೆ ನೀಡುವಂತೆ ಕೋರಿದ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಿದ ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದರು.
ಇ ಮೇಲ್ ಮೂಲಕ ಬಂದಿದ್ದ ಬಾಂಬ್ ಸ್ಫೋಟದ ಬೆದರಿಕೆಯ ಕುರಿತು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ಜಿ.ಈ. ಮಾಧ್ಯಮಗಳಿಗೆ ಮಾಹಿತಿ ನೀಡಿ, ಮಂಗಳವಾರ ತಡ ರಾತ್ರಿ ಈ ಇ-ಮೇಲ್ ಬಂದಿದೆ. ನೋಡಿದ ತಕ್ಷಣ ಪೊಲೀಸ್ ರಕ್ಷಣಾಧಿಕಾರಿಗಳ ಗಮನಕ್ಕೆ ತರಲಾಯಿತು. ಶಿರಸ್ತೇದಾರರು ಜಯನಗರ ಠಾಣೆಯಲ್ಲಿ ದೂರು ನೀಡಿದ್ದರು. ಆನಂತರ ಶ್ವಾನದಳ ಹಾಗೂ ವಿಧ್ವಂಸಕ ಕೃತ್ಯಗಳ ವಿರೋಧಿ ತಪಾಸಣಾದ ತಂಡ ವನ್ನು ಸ್ಥಳಕ್ಕೆ ಕರೆಸಿ ನ್ಯಾಯಾಲಯದ ಕಟ್ಟಡ, ನ್ಯಾಯಾಂಗ ಕೊಠಡಿಗಳು, ವಾಹನ ನಿಲುಗಡೆ ಪ್ರದೇಶ, ಕ್ಯಾಂಟೀನ್ ಗಳು ಹಾಗೂ ಸಾರ್ವಜನಿಕರು ಸಂಚರಿಸುವ ಸ್ಥಳಗಳಲ್ಲಿ ಸಮಗ್ರ ತಪಾಸಣೆ ನಡೆಸಿದರು. ತಪಾಸಣೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಸ್ಫೋಟಕ ಪತ್ತೆಯಾಗಲಿಲ್ಲ ಎಂದರು.
ನ್ಯಾಯಾಲಯದ ಆಡಳಿತಾಧಿಕಾರಿಗಳು ದೂರು ನೀಡಿದ ತಕ್ಷಣವೇ ನಮ್ಮ ಸಿಬ್ಬಂದಿಯೊಂದಿಗೆ ನ್ಯಾಯಾಲಯಕ್ಕೆ ಬಿಗಿ ಭದ್ರತೆ ಒದಗಿಸಲಾಯಿತು. ಶ್ವಾನದಳ ಹಾಗೂ ವಿಧ್ವಂಸಕ ಕೃತ್ಯಗಳ ವಿರೋಧಿ ತಪಾಸಣಾದ ತಂಡವನ್ನು ಸ್ಥಳಕ್ಕೆ ಕರೆಸಿ ನ್ಯಾಯಾಲಯದ ಹೊರಗೆ ಎಲ್ಲಾ ಕೊಠಡಿಗಳನ್ನು ತಪಾಸಣೆಗೆ ಒಳಪಡಿ ಸಲಾಯಿತು. ಆದರೂ ಎಲ್ಲಿಯೂ ಸ್ಫೋಟಕ ದ ಯಾವುದೇ ವಸ್ತುಗಳು ಸಿಕ್ಕಿಲ್ಲ. ಆದರೂ ಈಗ ನ್ಯಾಯಾಲಯಕ್ಕೆ ಭದ್ರತೆ ಒದಗಿಸಲಾಗಿದೆ. ಸಂಜೆವರೆಗೆ ಹೆಚ್ಚಿನ ಸಿಬ್ಬಂದಿ ಇರಲಿದ್ದಾರೆ.
– ಜಿಲ್ಲಾ ಪೊಲೀಸ್ ವರಿಷ್ಠ ನಿಖಿಲ್
