ಬೆಂಗಳೂರು,ಜು.25: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಓರಿಯಂಟಲ್ ಫೌಂಡೇಶನ್ (ರಿ) ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಮಾನವರತ್ನ ರಾಜ್ಯ ಪ್ರಶಸ್ತಿ’ ಸಮಾರಂಭವು ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಯಶಸ್ವಿಯಾಗಿ ಜರುಗಿತು.
ಈ ಸಮಾರಂಭದಲ್ಲಿ ಡಿ ಗ್ರೂಪ್ ನೌಕರರ ರಾಷ್ಟ್ರೀಯ ಉಪಾಧ್ಯಕ್ಷರು, ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಅಧ್ಯಕ್ಷರಾದ ಡಾ. ಎಚ್.ಎಸ್. ನಾಗೇಂದ್ರ ಹೆದ್ದೂರು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೊರರಾಜ್ಯಗಳಲ್ಲೂ ಕನ್ನಡ ಭಾಷೆ ಬಳಸಿ ಮೆರೆದ ಅವರ ಭಾಷಾಭಿಮಾನ, 8ನೇ ವೇತನ ಆಯೋಗದ ಜಾರಿ ಸೇರಿದಂತೆ ಡಿ ಗ್ರೂಪ್ ನೌಕರರ 11 ಬೇಡಿಕೆಗಳ ಈಡೇರಿಕೆ ಹಾಗೂ ದಿನಗೂಲಿ, ಹೊರಗುತ್ತಿಗೆ ನೌಕರರು, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಸಹಾಯಕರ ಹಕ್ಕುಗಳಿಗಾಗಿ ಅವರು ನಡೆಸಿದ ನಿರಂತರ ಹೋರಾಟವನ್ನು ಗುರುತಿಸಿ ಈ ಗೌರವ ಸಮರ್ಪಿಸಲಾಯಿತು.
ಇದೇ ವೇದಿಕೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಪ್ರಮುಖರಾದ ಸರೋಜಮ್ಮ ಕೋಂ ಎಚ್.ಎಸ್. ಸೋಮಯ್ಯ ಗೌಡ ಹೆದ್ದೂರು ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಶ್ಲಾಘಿಸಿ, ಅವರಿಗೂ ‘ಮಾನವರತ್ನ ರಾಜ್ಯ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.
