ಬೆಂಗಳೂರು,ಏ.27 : ಮಹಿಳೆಯರು ಯಾವ ಸ್ಥಳದಲ್ಲೂ ಸುರಕ್ಷಿತವಾಗಿಲ್ಲ ಎಂದು ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಮೆಟ್ರೋ ರೈಲಿನಲ್ಲಿ ಸಂಚರಿಸುವ ಮಹಿಳೆಯರ ದೇಹದ ಹಿಂಭಾಗಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಅವುಗಳನ್ನು ಇನ್‌ಸ್ಟಾಗ್ರಾಂ, ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಬಿತ್ತರಿಸಿ ನಂತರ ನಾಶ ಪಡಿಸಿದ ಆರೋಪಿಯ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.
ನನ್ನ ವಿರುದ್ಧದ ಎಫ್‌ಐಆರ್ ಮತ್ತು ನಗರದ 2 ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿನ ನ್ಯಾಯಿಕ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಕರಿಹೋಬನಹಳ್ಳಿ ತಿಗಳರಪಾಳ್ಯ ಮುಖ್ಯ ರಸ್ತೆಯ ನಿವಾಸಿ ಬಿ.ಕೆ.ದಿಗಂತ್ ( 28 ) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಈ ಕೃತ್ಯ ಎಸಗಿಲ್ಲ. ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದರೆ ಗೊತ್ತಾಗುತ್ತದೆ ಎಂಬ ಪ್ರತಿಪಾದನೆಗೆ ಮುಂದಾದರು. ಆದರೆ, ನ್ಯಾಯಮೂರ್ತಿಗಳು ವಕೀಲರ ಈ ಮಾತಿಗೆ ಕಿಡಿಕಿಡಿಯಾದರು. ಅವರನ್ನು ತೀವ್ರ ತರಾಟೆಗೂ ತೆಗೆದುಕೊಂಡರಲ್ಲದೆ, ಏನ್ರೀ ಇದೆಲ್ಲಾ ಅಸಂಬದ್ಧ. ಇಂಥಾದ್ದನ್ನೆಲ್ಲಾ ಮಾಡುವ ಇವರು ಯಾವ ರೀತಿಯ ಗಂಡಸರು ಮಹಿಳೆಯರನ್ನು ಎಲ್ಲೂ ಸುರಕ್ಷಿತವಾಗಿರಲು ಬಿಡುತ್ತಿಲ್ಲವಲ್ಲಾ ಎಂದು ಆತಂಕ ಹೊರಹಾಕಿದರು.
ಇಂತಹ ಕೃತ್ಯ ಮಾಡಿ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಮೆಟ್ರೊ ಚಿಕ್ಸ್ ಎಂಬ ಹೆಸರಿನಲ್ಲಿ ಬಿತ್ತರಿಸಿರುವುದು ಏನನ್ನು ಬಿಂಬಿಸುತ್ತದೆ ಗೊತ್ತಾ? ನಿಮ್ಮ ಅರ್ಜಿ ದಾರ ಮಾಡಿರುವ ಘನಂದಾರಿ ಕೆಲಸವನ್ನು ಅಪರಾಧ ಅಲ್ಲ ಎಂದು ಹೇಗೆ ಹೇಳುತ್ತೀರಿ? ಈ ಅರ್ಜಿಯಲ್ಲಿ ನಾನು ಯಾವುದೇ ತಾಂತ್ರಿಕ ಅಂಶಗಳ ಆಧಾರದಲ್ಲಿ ಆರೋಪಿ ಪಾರಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿ ಅರ್ಜಿ ವಜಾ ಮಾಡಿದರು.
