ಹಿರಿಯ ಪತ್ರಕರ್ತ ಡಿ. ಮಹದೇವಪ್ಪ ಅವರಿಗೆ ‘ಪಿ. ಲಂಕೇಶ್ ಪ್ರಶಸ್ತಿ’ ಪ್ರದಾನ

Kranti Deepa

ಶಿವಮೊಗ್ಗ, ಏ.14 : ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಡಿ. ಮಹದೇವಪ್ಪ ಅವರಿಗೆ ಪ್ರತಿಷ್ಠಿತ ಪಿ. ಲಂಕೇಶ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಸಂದರ್ಭದಲ್ಲೇ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ವಿಶೇಷವಾಗಿತ್ತು.

ಮಾಧ್ಯಮ ವಿಶ್ವಾಸ ಕಳೆದುಕೊಂಡರೆ ಪ್ರಜಾಪ್ರಭುತ್ವಕ್ಕೆ ಅಪಾಯ: ಬಿ. ವೆಂಕಟ ಸಿಂಗ್

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟ ಸಿಂಗ್, “ಇತ್ತೀಚಿನ ದಿನಗಳಲ್ಲಿ ಮುದ್ರಣ ಮಾಧ್ಯಮದ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ. ಆದರೆ ಸುದ್ದಿಯ ನೈಜತೆಯನ್ನು ತಿಳಿಯಲು ಪತ್ರಿಕೆಗಳಿಂದ ಮಾತ್ರ ಸಾಧ್ಯ. ಯಾವಾಗ ಪತ್ರಿಕಾರಂಗ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆಯೋ, ಆಗ ಪ್ರಜಾಪ್ರಭುತ್ವವೇ ತನ್ನ ಅಸ್ತಿತ್ವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ,” ಎಂದು ಎಚ್ಚರಿಸಿದರು.
ಮುಂದುವರಿದು ಮಾತನಾಡಿದ ಅವರು, “ಮಾಹಿತಿ ಹಕ್ಕು ಕಾಯ್ದೆಯು ತನಿಖಾ ಪತ್ರಿಕೋದ್ಯಮಕ್ಕೆ ‘ಬ್ರಹ್ಮಾಸ್ತ್ರ’ವಿದ್ದಂತೆ. ಪತ್ರಕರ್ತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಂತ್ರಜ್ಞಾನಕ್ಕೆ ತಕ್ಕಂತೆ ಅಪ್‌ಡೇಟ್ ಆಗದಿದ್ದರೆ ನಾವು ಔಟ್‌ಡೇಟ್ ಆಗುವುದು ಅನಿವಾರ್ಯ,ಎಂದರು.

ಪತ್ರಿಕೋದ್ಯಮಕ್ಕೆ ಶ್ರೇಷ್ಠ ಪರಂಪರೆಯಿದೆ: ಪ್ರೊ. ರಾಜೇಂದ್ರ ಚೆನ್ನಿ
ಹಿರಿಯ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಮಾತನಾಡಿ,ಪ್ರಜಾಪ್ರಭುತ್ವ ಕೇವಲ ಸಂವಿಧಾನದ ಪುಸ್ತಕದಲ್ಲಿ ಅಥವಾ ಚುನಾವಣೆಯಲ್ಲಿ ಇದ್ದರೆ ಸಾಲದು, ಅದು ಜನರ ಮನಸ್ಥಿತಿಯಲ್ಲಿ ಅಸ್ತಿತ್ವಕ್ಕೆ ಬರಬೇಕು. ಈ ಮನಸ್ಥಿತಿ ರೂಪಿಸಲು ಪತ್ರಿಕೋದ್ಯಮದಿಂದ ಮಾತ್ರ ಸಾಧ್ಯ. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ‘ಇಂಡಿಯನ್ ಒಪೀನಿಯನ್’ ಪತ್ರಿಕೆಯ ಮೂಲಕ ಅಹಿಂಸಾತ್ಮಕ ಹೋರಾಟಕ್ಕೆ ಪತ್ರಿಕೋದ್ಯಮವನ್ನು ಬಳಸಿಕೊಂಡರು. ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದೇ ಪತ್ರಿಕೋದ್ಯಮದ ಮೂಲ ಸಂಸ್ಕೃತಿ,ಎಂದು ಅಭಿಪ್ರಾಯಪಟ್ಟರು.

ಅರ್ಹರನ್ನು ಗುರುತಿಸಿ ಗೌರವಿಸುವುದೇ ಪ್ರೆಸ್ ಟ್ರಸ್ಟ್‌ನ ಗುರಿ: ಎನ್. ಮಂಜುನಾಥ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ, ಇಂದಿನ ಕಾಲದಲ್ಲಿ ಲಾಬಿ ಮಾಡಿ ಪ್ರಶಸ್ತಿ ಪಡೆಯುವವರ ನಡುವೆ, ಪ್ರೆಸ್ ಟ್ರಸ್ಟ್  ಅರ್ಹತೆ ಮತ್ತು ಹಿರಿತನದ ಆಧಾರದ ಮೇಲೆ ಸಾಧಕರನ್ನು ಆಯ್ಕೆ ಮಾಡುತ್ತಿದೆ. ಅಂಬೇಡ್ಕರ್ ಅವರು ಧ್ವನಿ ಇಲ್ಲದವರಿಗೆ ಧ್ವನಿಯಾಗಲು ಪತ್ರಿಕೆಗಳನ್ನು ಆರಂಭಿಸಿದ್ದರು. ಅವರ ಜನ್ಮದಿನದಂದೇ ಸಜ್ಜನ ಪತ್ರಕರ್ತ ಡಿ. ಮಹದೇವಪ್ಪ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ನಮಗೆ ಹೆಮ್ಮೆಯ ವಿಷಯ, ಎಂದರು.

ಪತ್ರಕರ್ತರು ಸಂಶೋಧಕರಾಗಿ ಕಾರ್ಯನಿರ್ವಹಿಸಲಿ: ಡಿ. ಮಹದೇವಪ್ಪ

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಡಿ. ಮಹದೇವಪ್ಪ, ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸುತ್ತಿದ್ದೇವೆ. ವರದಿಗಾರರು ತಮ್ಮ ಅನುಭವ ಮತ್ತು ಆಧಾರಗಳ ಮೇಲೆ ವರದಿ ಸಿದ್ಧಪಡಿಸಬೇಕು. ಪತ್ರಕರ್ತರು ಯಾವಾಗಲೂ ಸಂಶೋಧಕರಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ, ಎಂದು ತಮ್ಮ ಅನುಭವ ಹಂಚಿಕೊಂಡರು. ಪಿ. ಲಂಕೇಶ್‌ ಅವರ ಟೀಕೆ ಟಿಪ್ಪಣಿ ಬರಹಗಳು ರಾಜಕಾರಣಿಗಳ ಶೈಲಿ ಮತ್ತು ಸಮಾಜದ ನೈಜತೆಯನ್ನು ಪ್ರತಿಬಿಂಬಿಸುತ್ತಿದ್ದವು ಎಂದು ಅವರು ಸ್ಮರಿಸಿದರು.

Share This Article
";