ಮೆಗ್ಗಾನ್‌ನಲ್ಲಿ ನವಜಾತ ಶಿಶುಗಳ ‘ಎನ್‌ಐಸಿಯು’ ಸ್ಥಾಪನೆ : ಸಂಸದ

Kranti Deepa

ಶಿವಮೊಗ್ಗ ಏ.22  : ಸಿಮ್ಸ್ ಸಂಸ್ಥೆಯ ಮಕ್ಕಳ ವಿಭಾಗಕ್ಕೆ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಎನ್ ಐ ಸಿ ಯು ಘಟಕ ಸ್ಥಾಪಿಸುವುದಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರ ನಿಧಿಯಲ್ಲಿ ರೂ.5 ಕೋಟಿಗಳು ಮಂಜೂರಾಗಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಅವಧಿಗೂ ಮುನ್ನ ಜನಿಸಿದ, ತೂಕ ಕಡಿಮೆ ಇರುವ ಅಥವಾ ಉಸಿರಾಟದ ತೊಂದರೆ ಹೊಂದಿರುವ ನವಜಾತ ಶಿಶುಗಳ ವಿಶೇಷ ಕಾಳಜಿ ತೆಗೆದುಕೊಳ್ಳುವುದಕ್ಕಾಗಿ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಎನ್‌ಐಸಿಯು ಘಟಕ ಸ್ಥಾಪಿಸಲಾಗುತ್ತಿದೆ.  ಆರೋಗ್ಯ ಸೇವೆಗಳ ಬೇಡಿಕೆ ಹೆಚ್ಚಾದಂತೆ ಎನ್‌ಐಸಿಯು ಮೇಲಿನ ಒತ್ತಡವೂ ನಿರಂತರವಾಗಿ ಹೆಚ್ಚುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಹಣಕಾಸು ಸಚಿವರಿಗೆ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಅವರು ಈ ಬೇಡಿಕೆಗೆ ಸ್ಪಂದಿಸಿ ರೂ. 5 ಕೋಟಿ ಮಂಜೂರು ಮಾಡಿದ್ದಾರೆ ಎಂದರು.

ಆರ್ ಡಿ ಪಿ ಆರ್ ವತಿಯಿಂದ ಕಾಮಗಾರಿ ಕೈಗೊಳ್ಳಲಿದ್ದು ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ. ರೂ. 4.40 ಕೋಟಿ ಉಪಕರಣಗಳಿಗೆ ಹಾಗೂ ಉಳಿದ 60 ಲಕ್ಷ ಮೊತ್ತವನ್ನು ಮೂಲಭೂತ ಸೌಲಭ್ಯಕ್ಕಾಗಿ ಮಂಜೂರು ಮಾಡಲಾಗಿದೆ. ನೂತನ ಎನ್‌ಐಸಿಯು ಸ್ಥಾಪನೆಯಿಂದ ಗ್ರಾಮೀಣ ಭಾಗದ ಮತ್ತು ಬಡ ಕುಟುಂಬಗಳಿಗೆ ಅತ್ಯಂತ ಅನುಕೂಲವಾಗಲಿದೆ. ನವಜಾತ ಮಕ್ಕಳ ಹಕ್ಕುಗಳ ಕಾಪಾಡುವ ಮಹತ್ವದ ಹೆಜ್ಜೆ ಕೂಡ ಇದಾಗಿದೆ ಎಂದ ಅವರು ಮೆಗ್ಗಾನ್ ಆಸ್ಪತ್ರೆಯು ಸುತ್ತಮುತ್ತಲಿನ 4-5 ಜಿಲ್ಲೆಗಳಿಗೆ ಉತ್ತಮ ಸೇವೆ ನೀಡುತ್ತಿದ್ದು ಸ್ವಚ್ಚತೆಯಲ್ಲಿ ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದೆ ಎಂದರು. 

ಸಿಎಸ್‌ಆರ್ ನಿಧಿಯಿಂದ ಸೇವೆ:

ಜಿಲ್ಲೆಯ ದೃಷ್ಟಿಹೀನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತೆ ಭಾರತೀಯ ಸೌರಶಕ್ತಿ ನಿಗಮ ನಿಯಮಿತದ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿಯಲ್ಲಿ ನಗರದ ಶಾರದಾ ಅಂಧರ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಗೆ ರೂ. 23 ಲಕ್ಷ ಮೊತ್ತದ ಅತ್ಯಾಧುನಿಕ ಬ್ರೈಲ್ ಕಲಿಕಾ ಸಾಧನಗಳನ್ನು ಒದಗಿಸಲಾಗುತ್ತಿದೆ.  ಒಎನ್ ಜಿಸಿ ಯವರು ಎಸ್ ಸಿ,  ಎಸ್ ಟಿ ಸಮುದಾಯ ವಾಸಿಸುವ 1000 ಗ್ರಾಮಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಲು ಒಪ್ಪಿದ್ದಾರೆ. ಹಾಗೂ ಬೈಂದೂರು ಕ್ಷೇತ್ರಕ್ಕೆ 600 ಹೊಲಿಗೆ ಮಷೀನ್ ಗಳನ್ನು ನೀಡಲು ಒಪ್ಪಿದ್ದಾರೆ ಎಂದ ಅವರು ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ ಕೆಲಸಗಳು ಆಗುತ್ತಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಸಿಮ್ಸ್ ನಿರ್ದೇಶಕ ಡಾ|| ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ||ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ|| ಗೀತಾ, ಡಿಹೆಚ್‌ಓ ಡಾ|| ನಟರಾಜ್, ಸಿಮ್ಸ್ ಸಿಎಓ ಉಮಾ ಸದಾಶಿವ ಇತರರು ಹಾಜರಿದ್ದರು.

ಕೇಂದ್ರ ಸರ್ಕಾರದಿಂದ ಮಹಿಳೆಯರ ಗರ್ಭಗೊರಳಿನ ಕ್ಯಾನ್ಸರ್ ತಡೆಗಟ್ಟಲು 14 ವರ್ಷ ತುಂಬಿದ ಹಾಗೂ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಹೆಚ್ ಪಿ ವಿ ಲಸಿಕೆ ನೀಡಲಾಗುತ್ತಿದೆ.  ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ರೂ. 60 ಕೋಟಿ ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ವಾರ್ಡ್ ನಿರ್ಮಾಣ ಮಾಡಲಾಗುತ್ತಿದೆ. ಹಾಗೂ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗಲಿದೆ.
 -ಸಂಸದ, ರಾಘವೇಂದ್ರ.

Share This Article
";