ಶಾಶ್ವತ ಶುದ್ಧ ಕುಡಿಯುವ ನೀರು ಪೊರೈಸಿ

Kranti Deepa

ಶಿವಮೊಗ್ಗ,  ಏ.15 :  ನಗರದಲ್ಲಿ ಕಲುಷಿತ ನೀರು ಸರಬರಾಜು ಮುಂದುವರೆದಿರುವುದನ್ನು ಪ್ರತಿಭಟಿಸಿ ಮತ್ತು ಇದನ್ನು ತಪ್ಪಿಸಲು ಶಾಶ್ವತ ಪರಿಹಾರ ಕೈಗೊಳ್ಳುವಂತೆ ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತ ರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ, ಪ್ರತಿಭಟನೆ ನಡೆಸಲಾಯಿತು.

ಕೆಲವು ದಿನಗಳಿಂದ ಅತ್ಯಂತ ಕಲುಷಿತ ನೀರು ಸರಬರಾಜ ಆಗುತ್ತಿದ್ದು, ಇದು ಕುಡಿಯಲು ಸಾಧ್ಯವಿಲ್ಲದಂತಿದೆ. ನಾಗರಿಕರ ಆರೋಗ್ಯದ ಮೇಲೆ ಖಂಡಿತ ದುಷ್ಪರಿಣಾಮ ಬೀರಲಿದೆ. ಪ್ರತಿವರ್ಷ ಹಲವು ಬಾರಿ ನೀರಿನ ಟ್ಯಾಂಕ್‌ಗಳ ಸ್ವಚ್ಛತೆಯ ಕಾರಣಕ್ಕೆ ಹತ್ತಾರು ಸಾವಿರ ರೂಪಾಯಿ ವೆಚ್ಚವನ್ನು ಸಾರ್ವಜನಿಕರು ವ್ಯಯಿಸುವಂತಾಗಿದೆ. ಆದ್ದರಿಂದ ಕೂಡಲೇ ಕಲುಷಿತ ನೀರು ಸರಬರಾಜು ತಡೆಗಟ್ಟಿ ಶುದ್ಧ ನೀರನ್ನು ಪೂರೈಸಬೇಕೆಂದು ಆಗ್ರಹಿಸಿದರು.

ನೀರು ಸರಬರಾಜು ಮಂಡಳಿಯವರು ಮಳೆ ಬಂದ ಕಾರಣ ನೀರು ಶುದ್ಧೀಕರಣ ಘಟಕದಲ್ಲಿ ಕೆಸರು ತುಂಬಿದೆ ಎಂಬ ನೆಪ ಹೇಳುತ್ತಿದ್ದಾರೆ. ಆದರೆ ಮಳೆಗಾಲಕ್ಕೆ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅವರು ಆಲಿಸುತ್ತಿಲ್ಲ. ಜೊತೆಗೆ ಅಲ್ಲಿರುವ ಯಂತ್ರಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ನೀರು ಶುದ್ಧೀಕರಣ ಘಟಕ ಕೇಂದ್ರದ ಹಲವು ಘಟಕಗಳಲ್ಲಿ ಹೇರಳವಾಗಿ ಮಣ್ಣಿನ ಸಂಗ್ರಹ ಆಗಿದೆ. ಇದನ್ನು ಮಳೆಗಾಲಕ್ಕೆ ಮುಂಚಿತವಾಗಿಯೇ ತೆಗೆಸುವ ಕಾರ್ಯ ಆಗಬೇಕಿತ್ತು. ಶುದ್ಧೀಕರಣ ಘಟಕದಲ್ಲಿ ಕಾರ್ಯನಿರ್ವಹಿಸಬೇಕಾದ ಅನೇಕ ಯಂತ್ರಗಳು ಶಿಥಿಲವಾಗಿದ್ದು, ಅವು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ನೀರಿನಲ್ಲಿ ಮಣ್ಣಿನ ಅಂಶವನ್ನು ಕಡಿಮೆ ಮಾಡಲು ಆಲಮ್ ರಾಸಾಯನಿಕವನ್ನು ಸರಿಯಾದ ಪ್ರಮಾಣದಲ್ಲಿ ಬಳಸಬೇಕಿತ್ತು. ಆದರೆ ಇಲ್ಲಿ ಬಳಸುತ್ತಿಲ್ಲ ಎಂದು ದೂರಿದರು.

ವಿಶ್ವಸಂಸ್ಥೆಯ ಹಾಗೂ ಭಾರತೀಯ ಕುಡಿಯುವ ನೀರಿನ ಮಾನದಂಡಗಳನ್ನು ಅಳವಡಿಸಿಕೊಂಡು ಪರೀಕ್ಷಾಲಯದಲ್ಲಿ ನೀರು ಪರೀಕ್ಷಿಸಿ ಜನರಿಗೆ ಪೂರೈಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಶಿವಮೊಗ್ಗ ನೀರು ಶುದ್ಧೀಕರಣದ ಘಟಕದ ಸಾಮರ್ಥ್ಯ ಕಡಿಮೆ ಇದೆ ಅಥವಾ ಶುದ್ಧೀಕರಣ ಪ್ರಕ್ರಿಯೆ ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಉನ್ನತ ಮಟ್ಟದ ಚರ್ಚೆ ನಡೆಯಬೇಕು. ಆಲಂ ಬಳಕೆಯನ್ನು ಸರಿಪಡಿಸಲು ಶಿವಮೊಗ್ಗದ ನೀರು ಸರಬರಾಜು ಪ್ರಮಾಣ ಜಾಸ್ತಿ ಇದೆ. ಆದ್ದರಿಂದ ಇದು ಸಾಧ್ಯವಾಗುತ್ತಿಲ್ಲ  ಎನ್ನುವ ಅಂಶವನ್ನು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದರು.

ತಕ್ಷಣವೇ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು. ಹತ್ತಾರು ಕೊರತೆಗಳು ನೀರು ಶುದ್ಧೀಕರಣ ಘಟಕದಲ್ಲಿದ್ದು ಅವುಗಳನ್ನು ಪರಿಹರಿಸುವ ಗಂಭೀರ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದರು. ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ ವಿ ವಸಂತಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದರ್ಶಿ ಎ ಸತೀಶ್ ಕುಮಾರ್ ಶೆಟ್ಟಿ,  ಜನಾರ್ಧನ್  ಪೈ, ಶೇಖರ್ ಗೌಳೇರ್, ಭಾಸ್ಕರ್ ಕಾಮತ್,  ವಿನೋದ್ ಪೈ, ಸುಬ್ರಹ್ಮಣ್ಯ,  ಚೆನ್ನವೀರಪ್ಪ ಗಾಮನಗಟ್ಟಿ,  ಡಾ|| ಕೆ ಆರ್ ಶ್ರೀಧರ್, ರೋಟರಿಯ ಸದಸ್ಯರು ಪಾಲ್ಗೊಂಡಿದ್ದರು

ಶಿವಮೊಗ್ಗಕ್ಕೆ ಪ್ರಸ್ತುತ 84 ಎಮ್ ಎಲ್ ಡಿ ನೀರು ಸರಬರಾಜಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ 150 ಎಂಎಲ್‌ಡಿ ದಾಟಲಿದೆ. ಅದಕ್ಕೆ ತಕ್ಕ ಹಾಗೆ ಕುಡಿಯುವ ನೀರು ಶುದ್ಧೀಕರಣ ಘಟಕವನ್ನು ಏರಿಸಬೇಕಿದೆ ಮತ್ತು ಮಾನ್ಯತೆ ಪಡೆದ ನೀರು ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ. ಆದರೆ ಇದು ಯಾವುದಕ್ಕೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಇದರಿಂದ ಅನೇಕ ದುಷ್ಪರಿಣಾಮಗಳು ಸಾರ್ವಜನಿಕರ ಮೇಲೆ ಆಗುತ್ತಿದೆ.
– ಕೆ ವಿ ವಸಂತಕುಮಾರ್, ವೇದಿಕೆ ಪ್ರ. ಕಾರ್ಯದರ್ಶಿ

Share This Article
";