ಶಿವಮೊಗ್ಗ,ಏ.16 : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಅಪಾರ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯಾಗಲಿದೆ. ಜೀವಿಗಳಿಗೂ ಸಂಕಷ್ಟ ಎದುರಾಗಲಿದೆ. ಪಶ್ಚಿಮ ಘಟ್ಟದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಶರಾವತಿ ಕಣಿವೆಯಲ್ಲಿ ಯಾವುದೇ ಪರಿಸರ ಮಾರಕ ಯೋಜನೆಗಳನು ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಮತಿ ನೀಡಬಾರದು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಶರಾವತಿ ಕಣಿವೆಯಲ್ಲಿ ಪ್ರಸ್ತಾವಿತ ಸುಮಾರು 10,500 ಕೋಟಿ ರೂಪಾಯಿ ವೆಚ್ಚದ ’ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ಯನ್ನು ವಿರೋಸಿ ರಾಷ್ಟ್ರಭಕ್ತರ ಬಳಗ, ಪರಿಸರಕ್ಕಾಗಿ ನಾವು’ ಹಾಗೂ ವಿವಿಧ ಪರಿಸರ ಸಂಘಟನೆಗಳ ಸಂಯುಕ್ತ ಆಶ್ರಯ ದಲ್ಲಿ ನಗರದಲ್ಲಿ ಗುರುವಾರ ಹಮ್ಮಿಕೊಳ್ಳ ಲಾಗಿದ್ದ ಬೃಹತ್ ಸೈಕಲ್, ಮೋಟಾರ್ ಬೈಕ್ ಹಾಗೂ ಕಾರುಗಳ ಪ್ರತಿಭಟನಾ ರ್‍ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಯೋಜನೆ ಜಾರಿಯಾದಲ್ಲಿ ಹೋರಾಟ ಇನ್ನಷ್ಟು ಉಗ್ರಗೊಳ್ಳಲಿದೆ. ಇಂಧನ ಸಚಿವ ಕೆ ಜೆ. ಜಾರ್ಜ್ ಅವರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಸಹ ರೂಪಿಸಲಾಗುವುದು. ಏ.22 ರಂದು ಹೋರಾ ಟದ ಮುಂದಿನ ರೂಪುರೇಷೆ ನಿರ್ಧರಿಸಲು ಸಭೆ ಕರೆಯಲಾಗಿದೆ ಎಂದರು.
ರ್‍ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ನರರೋಗ ತಜ್ಞ ಡಾ|| ಶಿವರಾಮಕೃಷ್ಣ, ಸರಕಾರ ಇಂತಹ ಯೋಜನೆಗಳನ್ನು ರೂಪಿಸುವುದು ಮಹಾ ತಪ್ಪು. ವೈದ್ಯರು ಕಾಯಿಲೆ ತಡೆಗಟ್ಟುವಂತೆ ಕರೆಕೊಡುತ್ತೇವೆ. ಅದಕ್ಕೆ ತಕ್ಕ ಪರಿಸರವನ್ನು ಸರಕಾರ ಮತ್ತು ನಾವು ರೂಪಿಸಬೇಕು. ಪ್ರಕೃತಿ ನಮಗೆ ಗಾಳಿ, ಮಳೆ ಮತ್ತು ಬೆಳಕನ್ನು ನೀಡಿದೆ. ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಯೋಜನೆ ಬದಲು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂದರು.
ಪರಿಸರ ಹೋರಾಟಗಾರ ಪ್ರೊ. ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ಯೋಜ ನೆಯ ಹೆಸರಿನಲ್ಲಿ 16,000 ಮರಗಳನ್ನು ಕಡಿಯುವುದು ಅಕ್ಷಮ್ಯ. ಈಗಾಗಲೇ ಜಿಲ್ಲೆಯಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದ್ದು, ಇಂತಹ ಯೋಜನೆಗಳು ಪರಿಸರದ ಅಸಮತೋಲನಕ್ಕೆ ಕಾರಣವಾಗಲಿವೆ ಎಂದು ಆತಂಕವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆ.ಇ. ಕಾಂತೇಶ್, ಶಿವಮೊಗ್ಗದ ಜನತೆ ಇಂತಹ ವಿನಾಶಕಾರಿ ಯೋಜನೆಗಳನ್ನು ಒಪ್ಪುವುದಿಲ್ಲ. ಯೋಜನೆ ಜಾರಿಗೊಳಿಸಿದರೆ ಸಚಿವ ಜಾರ್ಜ್‌ಗೆ ಜಿಲ್ಲೆಯೊಳಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಗುಡುಗಿದರು.
ರಾಷ್ಟ್ರಭಕ್ತರ ಬಳಗದ ನೇತೃತ್ವದಲ್ಲಿ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಶಿವಮೊಗ್ಗ ಸೈಕಲ್ ಕ್ಲಬ್, ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ, ವೈಎಚ್‌ಎಐ ತರುಣೋದಯ ಘಟಕ, ಜಿಲ್ಲಾ ಕೈಗಾರಿಕಾ ಸಂಘ, ಅಣ್ಣಾ ಹಜಾರೆ ಹೋರಾಟ ಸಮಿತಿ, ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಮಹಿಳಾ ಸಂಘಗಳು ರ್‍ಯಾಲಿಗೆ ಕೈಜೋಡಿಸಿದವು.
ನಗರದ ಅಲ್ಲಮಪ್ರಭು ಮೈದಾನದಿಂದ ಆರಂಭವಾದ ಪ್ರತಿಭಟನಾ ರ್‍ಯಾಲಿಯು ಪ್ರಮುಖರಸ್ತೆಗಳಲ್ಲಿ ಸಂಚರಿಸಿ ಮಹಾವೀರ ವೃತ್ತದಲ್ಲಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಪ್ರಮುಖರಾದ ಡಾ|| ಪಿ. ನಾರಾಯಣ್, ಪ್ರೊ. ಶ್ರೀಪತಿ ಎಲ್.ಕೆ., ಶೇಖರ್ ಗೌಳೇರ್, ಇ. ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ಮೋಹನ್ ಜಾದವ್, ಶ್ರೀಕಾಂತ್, ಜನಾರ್ದನ ಪೈ, ವಿಶ್ವೇಶ್ವರಯ್ಯ, ರಾಮಾಚಾರ್, ವಿನಯ್ ಶಿವಮೊಗ್ಗ, ರಮೇಶ್ ಜಾಧವ್, ಸುವರ್ಣಾ ಶಂಕರ್, ಸೀತಾಲಕ್ಷ್ಮಿ, ಪ್ರಕಾಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
