ಶಿವಮೊಗ್ಗ, ಏ. 29: ಗ್ರಾಮಾಂತರ ಕ್ಷೇತ್ರದ ಹೊಳೆಹೊನ್ನೂರು ಹೋಬಳಿ, ಕೂಡ್ಲಿಗೆರೆ ಹೋಬಳಿಯ ಗ್ರಾಮಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣ ಹೆಚ್ಚು ಪರಿಹಾರ ನೀಡಬೇಕು ಮತ್ತು ರಾಷ್ಟ್ರೀಯ, ರಾಜ್ಯ ವಿಪತ್ತು ಪರಿಹಾರ ನಿಧಿಯ ಈಗಿರುವ ಪರಿಹಾರದ ನಿಧಿಯನ್ನು ಕನಿಷ್ಟ 20 ಪಟ್ಟು ಹೆಚ್ಚಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಎ. 26 ರಂದು ಹಿಂದೆಂದೂ ಕಂಡರಿಯದ ಆಲಿಕಲ್ಲು ಮಳೆ, ಬಿರುಗಾಳಿಯಿಂದ ಸುಮಾರು ಮನೆಗಳು ಹಾನಿಯಾಗಿ ವಾಸ ಮಾಡಲು ಮನೆಗಳು ಇಲ್ಲದಂತಾಗಿದೆ. ನಿರಾಶ್ರಿತರಿಗೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಅಡಿಕೆ ಮರಗಳನ್ನ ಬೆಳೆಯಲಾಗಿದ್ದು, ಒಂದು ಎಕರೆಯಲ್ಲಿರುವ ಅಡಿಕೆ ಮರಗಳಲ್ಲಿ 50 ಭಾಗಕ್ಕಿಂತ ಹೆಚ್ಚು ಮರಗಳು ನೆಲಕುರುಳಿವೆ. ರೈತರು ಆತಂಕಕಿಡಾಗಿದ್ದಾರೆ. ಜೊತೆಗೆ ತೆಂಗಿನ ಮರಗಳು ಸಹ ನೆಲಕುರುಳಿವೆ. ವರ್ಷಗಟ್ಟಲೇ ಬೆಳಸಿದ ಮರಗಳು ಒಂದೇ ರಾತ್ರಿಯಲ್ಲಿ ನೆಲಕುರುಳಿರುವುದು ಸಾವಿರಾರು ರೈತರ ಜೀವನಾಧಾರವೇ ಕಿತ್ತು ಹೋಗಿದೆ. ರೈತನ ಬೆವರಿನ ಫಸಲು ನೀರಲ್ಲಿ ಕೊಚ್ಚಿ ಹೋಗಿದೆ. ಅಡಿಕೆ ಒಂದು ಬೆಳೆ ಅಲ್ಲ, ಮಲೆನಾಡಿನ ಜೀವನಾಡಿ. ಆದ್ದರಿಂದ ಈ ಘಟನೆಯ ಬಗ್ಗೆ ಅಧಿಕಾರಿಗಳಿಂದ ನೈಜವಾದ ಸರ್ವೆ ಮಾಡಿಸಿ ತಕ್ಷಣವೇ ಪರಿಹಾರ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ರಾಷ್ಟ್ರೀಯ, ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಪ್ರಕಾರ ಪರಿಹಾರದ ಮೊತ್ತ ೧ಹೆಕ್ಟ ಒಣಭೂಮಿ ಬೆಳೆಗೆ 8,500 ರೂ, ನೀರಾವರಿ ಬೆಳೆಗೆ 17 ಸಾವಿರ ರೂ, ಬಹುವಾರ್ಷಿಕ ತೋಟದ ಬೆಳೆಗಳಿಗೆ 22,500 ರೂ. ಇದೆ. ಈ ಪರಿಹಾರವು 33 % ಗಿಂತ ಹೆಚ್ಚು ಹಾನಿಯಾಗಿದ್ದರೆ ಮಾತ್ರ ಕೊಡಬಹುದು. ಒಂದು ಹೆಕ್ಟರ್ (2’ ಎಕರೆ) ಅಡಿಕೆ ಬೆಳೆಗೆ 22,500 ರೂ. ಒಂದು ಎಕರೆಗೆ 9 ಸಾವಿರದಂತೆ 548 ಗಿಡಿಗಳಿಗೆ ಲೆಕ್ಕ ಹಾಕಿದಾಗ ಒಂದು ಮರಕ್ಕೆ 16 ರೂ. ಬರುತ್ತದೆ. ಈ 16 ರೂಪಾಯಿಂದ ಒಂದು ಅಡಿಕೆ ಮರವನ್ನು ತೋಟದಿಂದ ಕಡಿದು ಹೊರಗೆ ಸಾಗಿಸಲಿಕ್ಕೂ ಸಹ ಸಾಧ್ಯವಿಲ್ಲ. ಆದ್ದರಿಂದ ವಿಪತ್ತು ಪರಿಹಾರ ನಿಧಿ ಹೆಚ್ಚಿಸಲು ಈ ಅವರು ಆಗ್ರಹಿಸಿದರು.
ರೈತ ಸಂಘ ಪಾದಯಾತ್ರೆ, ಚಳುವಳಿಗಳನ್ನ ಮಾಡಿ ಈ ಬಗ್ಗೆ ಒತ್ತಾಯಿಸುತ್ತಾ ಬಂದಿದೆ. ಆದರೆ ದರ ಹೆಚ್ಚು ಮಾಡಿಲ್ಲ. ಈಗಲಾದರೂ ಹೆಚ್ಚಿಸಬೇಕೆಂದು ಒತ್ತಾಯಿಸಿದರಲ್ಲದೆ, ಅಡಿಕೆ ಬೆಳೆ ಬೆಳೆಯಲು ಅಡಿಕೆ ಸಸಿನೆಟ್ಟು ಸಾವಿರಾರು ರೂಪಾಯಿಗಳು ಖರ್ಚು ಮಾಡಿ ಫಸಲು ಬರಲು ಕನಿಷ್ಟ ೮ವರ್ಷ ಕಾಯಬೇಕು. ಈ ರೀತಿ ಬೆಳೆಸಿದ ಅಡಿಕೆ ಮರಗಳು ಸಂಪೂರ್ಣ ನೆಲಕರುಳಿದಾಗ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ. ಆದ್ದರಿಂದ ಮೇಲ್ಕಂಡ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಕೆಳಕಂಡ ಒತ್ತಾಯಗಳನ್ನು ತಕ್ಷಣವೇ ಈಡೇರಿಸಬೇಕೆಂದು ಈ ಮೂಲಕ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಟಿ.ಎಂ ಚಂದ್ರಪ್ಪ, ಮಹಿಳಾ ಸಂಚಾಲಕಿ ಭಾಗ್ಯ ರಾಘವೇಂದ್ರ, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷ ಪಿ.ಶೇಖರಪ್ಪ, ಮಹದೇವಪ್ಪ, ಜಿಲ್ಲಾ ಕಾರ್ಯದರ್ಶಿ ಗುರುಶಾಂತ, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಎನ್ ಪಂಚಾಕ್ಷರಿ, ತಾ. ಪ್ರಧಾನ ಕಾರ್ಯದರ್ಶಿ ಸಿ.ಬಿ ಹನುಮಂತಪ್ಪ, ರೈತರು ಹಾಜರಿದ್ದರು.
ಈಗಿರುವ ರಾಷ್ಟ್ರೀಯ ವಿಪತ್ತು ಪರಿಹಾರದ ಮೊತ್ತವನ್ನು 20 ಪಟ್ಟು ಹೆಚ್ಚಿಸಬೇಕು. ಎಲ್ಲಾ ರೈತರಿಗೆ ಎಕರೆಗೆ ಕನಿಷ್ಟ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಜಿಲ್ಲಾಧಿಕಾರಿ ಪ್ರತಿ ಹಳ್ಳಿಗೂ ಹೋಗಿ ನೈಜ ಸಮೀಕ್ಷೆ ಮಾಡಿಸಬೇಕು. ಪೇಪರ್ ಕಿರಿಕಿರಿ ಇಲ್ಲದೇ ಬೆಳೆವಿಮೆ ತಕ್ಷಣ ಬಿಡುಗಡೆ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬಡ್ಡಿ ರಹಿತವಾಗಿ ಹೊಸ ಸಾಲ ಕೊಡಬೇಕು. ಹಾನಿಗೊಳಗಾದ ಮನೆಗಳಿಗೆ ಹೊಸದಾಗಿ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂಪಾಯಿ ಪರಿಹಾರ ಕೊಡಬೇಕು .
– ರೈತ ಮುಖಂಡರು .
