ಶಿವಮೊಗ್ಗ ,ಮೇ .16 : ಸಹಕಾರ ಸಂಘದಲ್ಲಿ ಪಾರದರ್ಶಕತೆ ಇದ್ದಾಗ ಮಾತ್ರ ಶತಮಾನೋತ್ಸವ ಮಾಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಕುವೆಂಪು ರಂಗಮಂದಿರ ದಲ್ಲಿ ನಡೆದ ಶ್ರೀ ಬಸವೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘದ ಶತಮಾ ನೋತ್ಸವ ಧರ್ಮ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭ ವಾದ ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘ ಶತಮಾನೋತ್ಸವ ಆಚರಿಸುತ್ತಿರುವುದಕ್ಕೆ ಪಾರದರ್ಶಕ ವಾದ ಆಡಳಿತವೇ ಕಾರಣವಾಗಿದೆ ಎಂದು ಹೇಳಿದರು.
ಜನರ ಮನೆ ಬಾಗಿಲಿಗೆ ಆರ್ಥಿಕ ವ್ಯವಸ್ಥೆಯನ್ನು ತೆಗೆದುಕೊಂಡು ಹೋಗುವಂತಹ ಕಾರ್ಯ ಸಹಕಾರ ಸಂಘದಿಂದ ಆಗುತ್ತದೆ ಎಂದ ಅವರು, ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘ ಇಡೀ ಸಹಕಾರಿ ಕ್ಷೇತ್ರದಲ್ಲೇ ಮಾದರಿಯಾಗಿದೆ ಎಂದರು.
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಆದರ್ಶ ಚಿಂತನೆಗಳ ಅಗತ್ಯವಿದ್ದು, ಸಂಘಟನೆಗಳು ಬೆಳೆಯಲಿ ಆದರೆ ಅಕಾರಕ್ಕಾಗಿ ಸಂಘರ್ಷಗಳು ನಡೆಯಬಾರದು ಎಂದರು.
ಸಮಾಜದ ಉನ್ನತಿ ಹಾಗೂ ಶ್ರೇಯಸ್ಸಿಗಾಗಿ ರಚನಾತ್ಮಕ ಕಾರ್ಯ ಗಳು ನಡೆಯಬೇಕು. ಸುಖ-ನೆಮ್ಮದಿಯ ಬದುಕಿಗೆ ಆರ್ಥಿಕ ಸಂಪನ್ಮೂಲ ಮುಖ್ಯವಾಗಿ ದ್ದು, ದೇಹವನ್ನು ದುಡಿಮೆಗೆ ಹಾಗೂ ಮನಸ್ಸನ್ನು ಭಗವಂತನಿಗೆ ಅರ್ಪಿಸಿದಾಗ ಬದುಕು ವಿಕಾಸಗೊಳ್ಳುತ್ತದೆ ಎಂದರು.
1925 ರಲ್ಲಿ ಸ್ಥಾಪಿತಗೊಂಡ ಶ್ರೀ ಬಸವೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘ 2025 ಕ್ಕೆ ನೂರು ವರ್ಷಗಳನ್ನು ಪೂರೈಸಿರುವುದು ಸಂತಸದ ಸಂಗತಿ. ಸಂಘದ ಅಧ್ಯಕ್ಷ ಬಳ್ಳೇಕೆರೆ ಸಂತೋಷ ಅವರ ನೇತೃತ್ವದಲ್ಲಿ ಶತಮಾನೋತ್ಸವ ಸಮಾ ರಂಭ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿ ದರು. ಸಂಘದ ಬೆಳವಣಿಗೆಗೆ ಶ್ರಮಿ ಸಿದ ಹಿಂದಿನ ಆಡಳಿತ ಮಂಡಳಿಗಳ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಕಾಶೀ ಪೀಠದ ಡಾ. ಚಂದ್ರಶೇಖರ ಜಗದ್ಗುರುಗಳು ಮಾತನಾಡಿ, ಸಂಘ ಸಂಸ್ಥೆಗಳು ಬೆಳೆಯಲು ಸದಸ್ಯರ ಸಹನೆ, ಸಹಕಾರ ಹಾಗೂ ತಾಳ್ಮೆ ಮುಖ್ಯ ಎಂದು ಹೇಳಿ ದರು. ಪರಸ್ಪರ ಸಹಕಾರದಿಂದ ಸಮೃದ್ಧಿ ಸಾಧ್ಯ ವಾಗಿದ್ದು, ಆರ್ಥಿಕವಾಗಿ ದುರ್ಬಲರಿಗೆ ಸಂಘ ನೀಡಿದ ನೆರವು ಮರೆಯಲಾಗದು ಎಂದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ತೊಗರ್ಸಿ ಚನ್ನವೀರ ಶಿವಾಚಾರ್ಯರು ಹಾಗೂ ತಾವರೆಕೆರೆ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.
ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಸಂಸದ ಆಯನೂರು ಮಂಜುನಾಥ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಂಘದಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು.
