ಶಿವಮೊಗ್ಗ, ಮೇ .16 : ಮೆಗ್ಗಾನ್ ಆಸ್ಪತ್ರೆಯ ಹೈಟೆಕ್ ಶವಾಗಾರ, ಡಿಜಿಟಲ್ ಲೈಬ್ರರಿ ಮತ್ತು ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಸಿದ್ಧ್ದವಾಗಿದ್ದರೂ ಅದನ್ನು ಆರಂಭಿಸದಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ವಿಷಯದಲ್ಲಿ ಅಧಿಕಾರಿಗಳಷ್ಟೇ ಜಿಲ್ಲಾ ಉಸ್ತುವಾರಿ ಸಚಿವರೂ ನಿರ್ಲಕ್ಷ್ಯ ವಹಿಸಿದ್ದಾರೆ . ಇನ್ನು 15 ದಿನದಲ್ಲಿ ಇವು ಉದ್ಘಾಟನೆಗೊಳ್ಳದಿದ್ದಲ್ಲಿ ಶವಗಾರದ ಮುಂಭಾಗ ಧರಣಿ ಸತ್ಯಾಗ್ರಹವನ್ನು ಪಕ್ಷದಿಂದ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದ್ದಾರೆ.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶವ ಪರೀಕ್ಷೆಗೆ ಸುಮಾರು ಎರಡು ಗಂಟೆ ಬೇಕಾಗುತ್ತದೆ. ದುಃಖತಪ್ತ ಮೃತರ ಸಂಬಂಧಿಗಳು ಸ್ನೇಹಿತರಿಗೆ ಸರಿಯಾದ ವಿಶ್ರಾಂತಿಯ ವ್ಯವಸ್ಥೆ ಇಲ್ಲದೆ ಮರದ ಕೆಳಗೆ ನಿಲ್ಲಬೇಕಾಗಿದೆ. ಒಂದು ವೇಳೆ ಮಳೆ ಬಂದರೆ ಮರಗಳ ಆಶ್ರಯ ಪಡೆಯಬೇಕಾಗುತ್ತದೆ. ಮರದ ಕೊಂಬೆಗಳು ಬಿದ್ದರೆ ಅವರ ಶವ ಪರೀಕ್ಷೆಯೂ ಕೂಡ ಅಲ್ಲಿಯೇ ಎಉದರಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
೨೦೧೭ ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ 2 ಕೋಟಿ ವೆಚ್ಚದಲ್ಲಿ ಹೈಟೆಕ್ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು. ಇದರಲ್ಲಿ ಶವ ಪರೀಕ್ಷೆ ಕೊಠಡಿ, ಪೊಲೀಸ್ ಮಹಜರು ಕೊಠಡಿ, ಬಂದವರಿಗೆ ಎಲ್ಲ ರೀತಿ ಸೌಲಭ್ಯವುಳ್ಳ ಕೊಠಡಿ ಇವೆ. ಈಗ ಸಣ್ಣಪುಟ್ಟ ಕೆಲಸಗಳಿದ್ದು, ಅದನ್ನು ಕೂಡಲೇ ಮುಗಿಸಿ ಲೋಕಾರ್ಪಣೆಗೊಳಿಸಬೇಕು. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹತ್ತು ಕೋಟಿ ರೂ. ಹಾಗೂ ಡಿಜಿಟಲ್ ಗ್ರಂಥಾಲಯಕ್ಕೆ 3 ಕೋಟಿ ರೂ, ರೋಗಿಗಳ ಸಂಬಂಧಿಕರ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಇವುಗಳ ಕಾಮಗಾರಿ ಹೆಚ್ಚು ಕಡಿಮೆ ಮುಗಿದಿದೆ. ಕೂಡಲೇ ಇದನ್ನು ಸಹ ಪೂರ್ಣಗೊಳಿಸಿ ಉದ್ಘಾಟನೆಗೊಳಿಸಬೇಕೆಂದು ಆಗ್ರಹಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಗಂಜಿ ಕೇಂದ್ರವಾಗಿ ಮಾರ್ಪಟ್ಟಿದೆ. ಊರುಗಡೂರಿನ ಲೇಔಟ್‌ನಲ್ಲಿ 3039 ಅರ್ಜಿಗಳದ್ದು, 687 ನಿವೇಶನ ಹಂಚಬೇಕಾಗಿದೆ. ಇದರಲ್ಲಿ 174 ನಿವೇಶನ ಭೂಮಾಲೀಕರಿಗೆ ನೀಡಬೇಕಾಗಿದ್ದು, 76 ಮೂಲೆ ನಿವೇಶನಗಳಿವೆ. ಒಟ್ಟಾರೆ 432 ನಿವೇಶನ ಹಂಚಬೇಕಾಗಿದೆ. ಈ ಲೇಔಟ್‌ಗಾಗಿ ಈಗಾಗಲೇ ಎರಡು ಬಾಲಿ ಅರ್ಜಿಗಳನ್ನು ಕರೆದಿದ್ದಾರೆ. 4 ವರ್ಷದವಾದರೂ ಸಹ ಇದುವರೆಗೆ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ ಅವರು ಒಂದು ವೇಳೆ ಹಂಚಿಕೆ ಮಾಡಲು ವಿಳಂಬಿಸಿದರೆ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ನಗರ ಘಟಕದ ಅಧ್ಯಕ್ಷ ದೀಪಕ್ ಸಿಂಗ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಪ್ರಮುಖರಾದ ತ್ಯಾಗರಾಜ, ನರಸಿಂಹ ಗಂಧದಮನೆ, ಉಮಾಶಂಕರ ಉಪಾಧ್ಯಾಯ, ಹೆಚ್.ಎಂ.ಸಂಗಯ್ಯ, ರಘು, ಗೋಪಿ ಮೊದಲಿಯಾರ್, ವೆಂಕಟೇಶ್, ಸುನೀಲ್‌ಗೌಡ, ಸುರೇಶ್ ನಾಡಿಗ್, ಶಂಕರ್ ಇನ್ನಿತರರು ಇದ್ದರು.
