ಶಿವಮೊಗ್ಗ,ಮೇ.13 : ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸಕ್ರೆಬೈಲ್ ಪ್ರಕೃತಿ ಫಿಶ್ ಹೋಟೆಲ್ ಮಾಲೀಕ ವಿಜಯಕುಮಾರ್ (42) ನಿಧನರಾದರು.
ಸೋಮವಾರ ರಾತ್ರಿ ಶಿವಮೊಗ್ಗದಿಂದ ಸಕ್ರೆಬೈಲು ಕಡೆಗೆ ತೆರಳುವಾಗ ಅವರು ಸಂಚರಿಸುತ್ತಿದ್ದ ಬೈಕ್ ಅಪಘಾತ ಸಂಭವಿಸಿತ್ತು. ಅರಕೆರೆ ಬಳಿ ಅಪಘಾತವಾಗಿ ವಿಜಯ್‌ಕುಮಾರ್ ತಲೆಗೆ ತೀವ್ರ ಪೆಟ್ಟಾಗಿತ್ತು. ಕೂಡಲೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಕಳೆದ ರಾತ್ರಿಯೇ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ವಿಫಲವಾಗಿ ವಿಜಯಕುಮಾರ್ ಸಾವನ್ನಪ್ಪಿದ್ದಾರೆ.
ಸಕ್ರೆಬೈಲು ಆನೆ ಬಿಡಾರದ ಎದುರಿಗೆ ವಿಜಯ್‌ಕುಮಾರ್ ಒಡೆತನದ ಪ್ರಕೃತಿ ಫಿಶ್ ಹೊಟೇಲ್ ಆರಂಭಿಸಿದ ಇವರು, ಮೀನಿನ ಊಟಕ್ಕೆ ಬ್ರಾಂಡ್ ಆಗಿ ಹೊರಹೊಮ್ಮಿದರು. ಆ ಭಾಗದಲ್ಲಿ ಮೊದಲ ಬಾರಿಗೆ ಮೀನಿನ ಊಟದ ಹೊಟೇಲ್ ಆರಂಭಿಸುವ ಮೂಲಕ ಮೀನಿನ ವಿವಿಧ ಖಾದ್ಯಗಳನ್ನು ಅತ್ಯಂತ ರುಚಿಕಟ್ಟಾಗಿ ಗ್ರಾಹಕರಿಗೆ ಉಣಬಡಿಸಿ ಅವರ ಮನ ಗೆದ್ದಿದ್ದರು.
ಗ್ರಾಹಕರೊಂದಿಗೆ ಸದಾ ನಗುಮುಖದಿಂದಲೇ ಮಾತನಾಡುತ್ತಿದ್ದ ಇವರು, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇವರ ಅಂತ್ಯಕ್ರಿಯೆ ಸಕ್ರೈಬೈಲಿನ ರುದ್ರಭೂಮಿ ಯಲ್ಲಿ ಕುಟುಂಬದ ಸದಸ್ಯರ ಹಾಗೂ ಆತ್ಮೀಯರ ಸಮ್ಮುಖದಲ್ಲಿ ನೆರವೇರಿತು.
ಸಂತಾಪ : ಇವರ ನಿಧನಕ್ಕೆ ‘ಕ್ರಾಂತಿದೀಪ’ ಬಳಗ ಸೇರಿದಂತೆ ಗಣ್ಯರು, ಸ್ನೇಹಿತರು ತೀವ್ರ ಸಂತಾಪ ಸೂಚಿಸಿ ಇವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
