ಮಾಜಿ ಸಚಿವ ಹೆಚ್.ವಿಶ್ವನಾಥ್ ವಿದ್ಯಾರ್ಥಿಗಳ ಕ್ಷಮೆ ಕೇಳಲಿ

Kranti Deepa

ಶಿವಮೊಗ್ಗ ಏ.28 : ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಹೊಸ ದಾಖಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  94.1 % ಫಲಿತಾಂಶ ಪಡೆದು ಪಾಸಾದ ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡಿ ಪಾಸಾಗಿದ್ದಾರೆ ಎಂದು ವಿದ್ಯಾರ್ಥಿಗಳನ್ನು ಅವಮಾನಿಸಿರುವ ಮಾಜಿ ಶಿಕ್ಷಣ ಸಚಿವ ಹೆಚ್. ವಿಶ್ವನಾಥ್ ಈ ರಾಜ್ಯದ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕೆಂದು ಶಿವಮೊಗ್ಗ ಜಿಲ್ಲಾ ಕಾಂಗ್ರಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಎಂ.ರಮೇಶ್ ಶಂಕರಘಟ್ಟ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು,ಶಾಲೆಗಳಲ್ಲಿ ಸಿಸಿ ಟಿವಿ ಆಫ್ ಮಾಡಿ ಸಾಮೂಹಿಕ ಕಾಪಿ ಮಾಡಿಸಲಾಗಿದೆ ಎಂಬ ಅಸಮಂಜಸ ಹೇಳಿಕೆಯಿಂದಾಗಿ ಪ್ರಾಮಾಣಿಕವಾಗಿ ಪರೀಕ್ಷೆಯನ್ನು ಬರೆದು ಪಾಸಾದ ವಿದ್ಯಾರ್ಥಿಳಿಗೆ ಮಾನಸಿಕವಾಗಿ ಘಾಸಿಯನ್ನುಂಟು ಮಾಡುವ ಕೆಲಸ ಮಾಡಿದ್ದಾರೆ. ಹೆಚ್. ವಿಶ್ವನಾಥ್ ನಿನ್ನೆ ನಡೆಸಿರುವ ಪತ್ರಿಕಾಗೋಷ್ಠಿಯನ್ನು ನೋಡಿದಾಗ ವಯೋಸಹಜ ಅರಳು-ಮರಳು ಅವರನ್ನು ಕಾಡುತ್ತಿದೆ ಎಂದು ಭಾಸವಾಗುತ್ತದೆ. ಅವರ ಮಾತಿನಲ್ಲಿ ಒಂದಕ್ಕೊಂದು ತಾಳೆಯಾಗದೆ ಅಸಂಬದ್ಧವಾಗಿ ಮಾತಾಡಿರುವುದು ಕಂಡುಬರುತ್ತದೆ ಎಂದಿದ್ದಾರೆ.

ಮಧು ಬಂಗಾರಪ್ಪನವರ ಶೈಕ್ಷಣಿಕ ಅರ್ಹತೆ ಬಗ್ಗೆ ಮಾತನಾಡಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಾಮರಾಜ್  ಕೇವಲ ಆರನೇ ತರಗತಿವರೆಗೆ ವ್ಯಾಸಂಗ ಮಾಡಿದ್ದರು. ಅವರೊಬ್ಬ ದೂರದರ್ಶಿತ್ವದ ನಾಯಕರಾದರು. ಉಚಿತ ಶಿಕ್ಷಣ, ಕಡ್ಡಾಯ ಶಾಲಾ ಶಿಕ್ಷಣ ಮತ್ತು ಕ್ರಾಂತಿಕಾರಿ ಮಧ್ಯಾಹ್ನದ ಉಟ ಯೋಜನೆಯನ್ನು ಪ್ರಾರಂಭಿಸಿದ್ದರು. ಮಾತು ಸಾಧನೆಯಾಗಬಾರದು, ನನ್ನ ಕೆಲಸವೇ ಸಾಧನೆಯಾಗಬೇಕೆಂಬ ರೀತಿಯಲ್ಲಿ ಮಧು ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

Share This Article
";