ಶಿವಮೊಗ್ಗ ,ಅ.29 : ನಾಲ್ಕು ದಶಕಗಳ ಕಾಲ ಪತ್ರಿಕಾ ಕ್ಷೇತ್ರದಲ್ಲಿ ಹಲವು ಏಳು ಬೀಳುಗಳನ್ನು ಕಂಡು ಶ್ರಮಿಸಿದ ಪರಿಣಾಮವಾಗಿ ಇಂದು ಕ್ರಾಂತಿ ದೀಪ ಪತ್ರಿಕೆಯ ಎನ್.ಮಂಜುನಾಥ್ ರವರಿಗೆ ಪತ್ರಿಕಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಮೊಹರೆ ಹಣಮಂತರಾಯ ಪ್ರಶಸ್ತಿ ಲಭಿಸಿದೆ ಎಂದು ಜಿಲ್ಲಾ ಬಂಧಿಖಾನೆ ಆಧಿಕ್ಷಕ ಡಾ. ರಂಗನಾಥ್ ಹೇಳಿದರು.
ನಗರದ ಮಥುರಾ ಪ್ಯಾರಡೇಸ್ ಸಭಾಂಗಣದಲ್ಲಿ ಜಿಲ್ಲಾ ಭಗೀರಥ ನೌಕರರ ಮತ್ತು ವೃತ್ತಿಪರರ ಸಂಘ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಪ್ರಶಸ್ತಿ ಲಭಿಸಬೇಕಾದರೆ ಶ್ರದ್ದೆ ಮತ್ತು ಶ್ರಮ ಎರಡೂ ಮುಖ್ಯವಾಗಿರುತ್ತದೆ. ಈ ಎರಡನ್ನೂ ಮಂಜುನಾಥ್ ಮೈಗೂಡಿಸಿಕೊಂಡಿದ್ದಾರೆ.ಇದರ ಪರಿಣಾಮವಾಗಿ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ ಎಂದು ಹೇಳಿದರು.
ಉಪ್ಪಾರ ಸಮಾಜ ಮಲಗಿರುವಂತೆ ನಟಿಸುತ್ತಿದೆ. ನಿದ್ದೆ ಮಾಡಿರುವವರನ್ನು ಎಬ್ಬಿಸಬಹುದು, ಆದರೆ ನಿದ್ದೆ ಮಾಡಿರುವಂತೆ ನಟಿಸುವವರನ್ನು ಎಬ್ಬಿಸುವುದು ಕಷ್ಟದ ಕೆಲಸ ಎಂದ ಅವರು, ಸಮಾಜ ಜಾಗೃತಗೊಳ್ಳಬೇಕು ಆಗ ಮಾತ್ರ ಒಂದಿಷ್ಟು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಿವೃತ್ತ ಡಿವೈಎಸ್ಪಿ ರಾಮಚಂದ್ರ ಮಾಳೇದೇವರ ಮಾತನಾಡಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮತ್ತು ಬೆಳೆಸುವ ಪ್ರಯತ್ನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಶ್ರೇಯೋಭಿವೃದ್ದಿಗೆ ಕೊಡುಗೆಯನ್ನು ನೀಡಬೇಕು.ಇದನ್ನು ಮಾಡಬೇಕಾದರೆ ಮೊದಲು ಸಂಘದ ಸದಸ್ಯತ್ವವನ್ನು ಪಡೆಯಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಎನ್.ಮಂಜುನಾಥ್ ರವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು.
ಸಂಘದ ಪ್ರದಾನ ಕಾರ್ಯದರ್ಶಿ ವಸಂತ್ ಹೋಬಳಿದಾರ್, ರಾಜ್ಯ ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ರಾಮಪ್ಪ, ಸಂಘದ ನಿರ್ದೇಶಕರುಗಳಾದ ಗಣೇಶ್ ಗಾಜನೂರು, ರವಿ ಹಾರನಹಳ್ಳಿ, ಕಿರಣ್ ಕಂಕಾರಿ, ಬಸವರಾಜ್ ಹೆಚ್.ದೇಸಾಯಿ ಇತರರು ಉಪಸ್ಥಿತರಿದ್ದರು.