ಕಲ್ಲುಕ್ವಾರೆಯಲ್ಲಿ ಕಾರ್ಮಿಕನ ಅನುಮಾನಾಸ್ಪದ ಸಾವು

Kranti Deepa

ರಿಪ್ಪನ್‌ಪೇಟೆ,ನ.04 : ಸಮೀಪದ ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಂಡಲಗದ್ದೆ ಗ್ರಾಮದಲ್ಲಿ ಜಾರ್ಖಂಡ್ ಮೂಲದ ಕಾರ್ಮಿಕನೊಬ್ಬ ಕಲ್ಲುಕ್ವಾರೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಮೃತನ ದೇಹವನ್ನು ಜಾರ್ಖಂಡ್‌ಗೆ ಸಾಗಿಸಲಾಗಿತ್ತಾದರೂ ಘಟನೆಯ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದ್ದಂತೆ ಮೃತದೇಹವನ್ನು ವಾಪಾಸ್ಸು ಮರಣೋತ್ತರ ಪರೀಕ್ಷೆಗೆ ಕರೆಸಿರುವ ಘಟನೆ ವರದಿಯಾಗಿದೆ.

ಜಾರ್ಖಂಡ್ ಮೂಲದ ಉದಯ್ (26 ) ಎಂಬ ಕಾರ್ಮಿಕ ಹೊಂಡಲಗದ್ದೆ ಕಲ್ಲುಕ್ವಾರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಬಗ್ಗೆ ವರದಿಯಾಗಿತ್ತು.
ಶುಕ್ರವಾರ ರಾತ್ರಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು ಉದಯ್ ಸಿಡಿಲು ಬಡಿದು ಸಾವನ್ನಪ್ಪಿರಬಹುದು ಆಥವಾ ಕಲ್ಲು ಗಣಿಯಲ್ಲಿ ಸ್ಫೋಟದಿಂದ ಸತ್ತಿರಬಹುದು ಎಂಬ ಊಹಾಪೋಹಗಳು ಸ್ಥಳೀಯರಲ್ಲಿ ಹುಟ್ಟಿಕೊಂಡಿತ್ತು.

ಈ ಊಹಾಪೋಹಗಳಿಗೆ ಪೂರಕವೆಂಬಂತೆ ಕಲ್ಲುಕ್ವಾರೆ ಮಾಲೀಕರು ಹಾಗೂ ಸಂಬಂಧಿಸಿದವರು ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ  ನೀಡದೆ ತರಾತುರಿಯಲ್ಲಿ ಕೋಣಂದೂರು ಅಸ್ಪತ್ರೆಗೆ ಮೃತದೇಹವನ್ನು ಕರೆದೊಯ್ದು ಸ್ವಾಭಾವಿಕ ಸಾವು ಎಂಬ ರಿಪೋರ್ಟ್ ರೆಡಿ ಮಾಡಿಸಿ ರಾತ್ರೋರಾತ್ರಿ ಮೃತದೇಹವನ್ನು ಜಾರ್ಖಂಡ್‌ಗೆ ಕಳುಹಿಸಿಕೊಟ್ಟಿದ್ದರು.

ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ರಿಪ್ಪನ್‌ಪೇಟೆ ಪೊಲೀಸ್‌ಠಾಣೆಯ ಪಿಎಸ್‌ಐ ಎಸ್.ಪಿ.ಪ್ರವೀಣ್ ಕುಮಾರ್  ಕಲ್ಲುಕ್ವಾರೆಗೆ ಸಂಬಂಧಿಸಿದವರನ್ನು ವಿಚಾರಣೆಗೆ ಒಳಪಡಿಸಿ ಘಟನೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವ ಹಿನ್ನೆಲೆಯಲ್ಲಿ ಜಾರ್ಖಂಡ್‌ಗೆ ಸಾಗಿಸಿದ್ದ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆಗೆ ಕರೆತರಲಾಗಿದೆ.

Share This Article
";