ಹೈಕೋರ್ಟ್ ಪೀಠ ನಮಗೆ ನ್ಯಾಯದ ಹಕ್ಕಿನ ಹೋರಾಟ: ಬಿ.ವೈ.ಆರ್

Kranti Deepa

ಶಿವಮೊಗ್ಗ,ಮೇ .26 : ನಗರದಲ್ಲಿ  ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎನ್ನುವುದು ಕೇವಲ ಆಗ್ರಹವಲ್ಲ.  ಇದು ನಮ್ಮ ಮಲೆನಾಡು ಮತ್ತು ಸುತ್ತ-ಮುತ್ತನ ಜಿಲ್ಲೆಗಳ ಜನರ ಸ್ವಾಭಿಮಾನದ ಹಾಗೂ ನ್ಯಾಯದ ಹಕ್ಕಿನ ಹೋರಾಟ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ  ಹಲವು ದಿನಗಳಿಂದ ಶಿವಮೊಗ್ಗ ವಕೀಲರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಅವರು ಮಂಗಳವಾರ ಪಾಲ್ಗೊಂಡು ಮಾತನಾಡಿದರು.

ನ್ಯಾಯ ಎಲ್ಲರಿಗೂ ಸುಲಭವಾಗಿ ಸಿಗಬೇಕು ಎನ್ನುವ ಸಂವಿಧಾನದ ಆಶಯವನ್ನು ಸಾಕಾರಗೊಳಿಸಲು ಶಿವಮೊಗ್ಗದಲ್ಲಿ ಪೀಠ ಸ್ಥಾಪನೆಯಾಗುವುದು ಅತ್ಯಗತ್ಯ. ಮಂಗಳೂರು ಹೈಕೋರ್ಟ್ ಪೀಠದ ಪ್ರಸ್ತಾವನೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳನ್ನು ಸೇರಿಸುವ ಆಲೋಚನೆ ಅತಾರ್ಕಿಕ.  “ನಮಗೆ ಕರಾವಳಿಯ ಸಹೋದರರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ಆದರೆ ಭೌಗೋಳಿಕ ವಾಸ್ತವವನ್ನು ಅರಿಯದವರು ಮಾತ್ರ ಇಂತಹ ಪ್ರಸ್ತಾವನೆ ಮಂಡಿಸಲು ಸಾಧ್ಯ ಎಂದು ಹೇಳಿದರು.

ಮಲೆನಾಡು ಮತ್ತು ಮಧ್ಯ ಕರ್ನಾಟಕದ ಲಕ್ಷಾಂತರ ಜನರ ನ್ಯಾಯ ಪ್ರಾಪ್ತಿಯ ಹಕ್ಕಿಗಾಗಿ ಪಕ್ಷಾತೀತವಾಗಿ ಒಗ್ಗೂಡಲು ಕರೆ ನೀಡಿದ ಅವರು, ಭೌಗೋಳಿಕ ಸವಾಲುಗಳನ್ನು ಕಡೆಗಣಿಸಿ ಮಂಗಳೂರು ಪೀಠಕ್ಕೆ ಶಿವಮೊಗ್ಗ ಸೇರಿಸುವ ಪ್ರಸ್ತಾವನೆಗೆ ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು.

ಶಾಸಕರಾದ ಡಿ.ಎಸ್.ಅರುಣ್, ಡಾ||ಧನಂಜಯ ಸರ್ಜಿ, ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಮಾಲತೇಶ್, ಸಂತೋಷ್ ಬಳ್ಳೇಕೆರೆ, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ವೀರಭದ್ರಪ್ಪ ಪೂಜಾಲಿ, ಸುರೇಖಾ ಮುರಳೀಧರ್, ವಿಶ್ವನಾಥ್, ಮಂಜುನಾಥ್, ವಕೀಲರಾದ ಶ್ರೀಪಾಲ್, ಲಕ್ಷ್ಮೀಕಾಂತ್ ಚಿಮಣೂರು, ವಕೀಲರ ಸಂಘದ ಪದಾಧಿಕಾಲಿಗಳು ಸೇರಿದಂತೆ ಮತ್ತಿತರಲಿದ್ದರು.

Share This Article
";