ಶಿವಮೊಗ್ಗ, ಮೇ .23 : ಬಿಜೆಪಿ ಜೊತೆಗಿನ ಜೆಇಡಿಎಸ್ ಮೈತ್ರಿಯಲ್ಲಿ ಕೆಲವು ಗೊಂದಲಗಳಿವೆ. ಆದ್ದರಿಂದ ಮೈತ್ರಿಯನ್ನು ನಂಬದೆ ಕೂಡ್ರದೆ ಸ್ವತಂತ್ರವಾಗಿ ಚುನಾವಣೆ ಎದುರಿಸಲು ಕಾರ್ಯ ಕರ್ತರು ಎಲ್ಲ ರೀತಿಯಲ್ಲೂ ತಯಾರಾಗಿರಬೇಕೆಂದು ಶಾಸಕಿ ಶಾರದಾ ಪೂರ್‍ಯಾ ನಾಯ್ಕ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ಶನಿವಾರ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಎಸ್‌ಸಿ, ಎಸ್ಟಿ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕ್ಕೆಯಾಗಿರುವ ಎಚ್.ಆರ್. ಹನುಮಂತಪ್ಪ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ಸ್ಥಳೀಯ ಸಂಸ್ಥೆ ಚುನಾವಣೆ ಸದ್ಯದಲ್ಲೇ ಬರಬಹುದು. ಎನ್‌ಡಿಎ ಜೊತೆಗಿನ ಮೈತ್ರಿ ಮು೦ದುವರೆಯಬಹುದು ಅಥವಾ ಮುಂದುವರೆಯದೇ ಇರಬಹುದು. ಸ್ವತಂತ್ರವಾಗಿ ಚುನಾವಣೆ ಎದುರಿಸುವ ಸ೦ದರ್ಭವೂ ಬರಬಹುದು. ಆದ್ದರಿಂದ ಕಾರ್ಯಕರ್ತರು ಈಗಿನಿಂದಲೇ ಪಕ್ಷದ ಸಂಘಟನೆಗೆ ಮುಂದಾಗಬೇಕು. ಮತದಾರರ ಮನಗೆಲ್ಲುವತ್ತ ಕೆಲಸ ಮಾಡಬೇಕೆಂದರು.
ಜೆಡಿಎಸ್ – ಬಿಜೆಪಿ ಮೈತ್ರಿ ಬಗ್ಗೆ ವಿಪಕ್ಷಗಳು ಟಿಕಿಸುತ್ತಿವೆ. ಆದರೂ ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಒಳ್ಳೆಯ ಖಾತೆಯನ್ನು ಕೊಟ್ಟಿದ್ದಾರೆ. ಆದರೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಹೆಚ್ಚಿನ ಸ್ಥಾನ ಗಳಿಸಬೇಕಿದೆ. ಕುಮಾರಸ್ವಾಮಿ ಮುಂದೆ ಮುಖ್ಯಮಂತ್ರಿ ಆಗಬೇಕೆನ್ನುವುದು ಪಕ್ಷದ ಕಾರ್ಯಕರ್ತರ ಅಭಿಲಾಷೆ ಆಗಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ದಾದಾಪೀರ್ ಸಾಬ್, ಕಾಂತರಾಜ್, ಸತೀಶ್, ರಾಕೇಶ್ ಡಿಸೋಜ, ಗೀತಾ ಸತೀಶ್, ನರಸಿಂಹ ಗಂಧದಮನೆ, ತ್ಯಾಗರಾಜ್, ಶೀಲಾ ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು.
