ಚದುರಂಗದ ಆಟದಲ್ಲಿ ಯಾವ ಕಾಯಿ ಮುನ್ನಡೆಸುತ್ತೇವೆ ಎಂದು ಯಾರೂ ಹೇಳುವುದಿಲ್ಲ: ಸಿಎಂ ಡಿ.ಕೆ.ಶಿ

Kranti Deepa

ಬೆಂಗಳೂರು, ಜೂ.08: “ರಾಜಕಾರಣದಲ್ಲಿ ಚದುರಂಗದ ಆಟ ಆಡುವಾಗ ಯಾರಾದರು ಯಾವ ರೀತಿ ಕಾಯಿ ನಡೆಸುತ್ತಾರೆ ಎಂದು ಹೇಳುತ್ತಾರೆಯೇ? ಯಾರು ಹೇಳುವುದಿಲ್ಲ ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು. ಪರಿಷತ್ ಚುನಾವಣೆಯಲ್ಲಿ ವಿನಯ್ ಕಾರ್ತಿಕ್ ಸ್ಪರ್ಧೆ, ಜೆಡಿಎಸ್ ಹೆಚ್ಚುವರಿ ಅಭ್ಯರ್ಥಿ ಸ್ಪರ್ಧೆ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.

ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ತಪ್ಪಿಸಿ ಬಿಜೆಪಿ ಅನ್ಯಾಯ ಮಾಡಿದೆ ಎಂದು ಸುರ್ಜೆವಾಲ ಅವರು ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ನಾನು ಸದ್ಯಕ್ಕೆ ಏನು ಮಾತನಾಡುವುದಿಲ್ಲ. ಅವರು ಮಾತಾಡಿದ್ದಾರೆ. ಆದರೆ ನಾನು ಮಾತಾಡಕ್ಕೆ ಹೋಗುವುದಿಲ್ಲ. ನಮ್ಮ ಪಕ್ಷದ ಚಿಂತನೆಯನ್ನು ನಾನು ಪಾಲನೆ ಮಾಡುತ್ತೇನೆ” ಎಂದರು.

ಸೂರಜ್ ಹೆಗ್ಡೆ ತ್ಯಾಗಕ್ಕೆ ಹೆಸರಾದವರು:
“ಸೂರಜ್ ಹೆಗ್ಡೆ ಆತ್ಮೀಯ ಸ್ನೇಹಿತ. ತ್ಯಾಗಕ್ಕೆ ಹೆಸರಾದವರು. ಇದೇ ಸ್ಥಾನ ಬೇಕು ಎಂದೂ ಕೇಳುತ್ತಿರಲಿಲ್ಲ. ನಾನು ಹಿಂದೆ ಅವರಿಗೆ ಮೈಸೂರು ಸಂಸದ ಸ್ಥಾನಕ್ಕೆ ಟಿಕೆಟ್ ಕೊಡಿಸಬೇಕು ಅಂತ ಬಹಳ ಹೋರಾಟ ಮಾಡಿದ್ದೆ. ಅವರು ದೇವರಾಜ ಅರಸು ಅವರ ಮೊಮ್ಮಗ. ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನ ಜೊತೆ ಪದಾಧಿಕಾರಿಯಾಗಿದ್ದವರು. ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾಗಿದ್ದವರು. ನಮ್ಮ ಸರ್ಕಾರ ರಾಜ್ಯ ಮಟ್ಟದ ಸಚಿವ ಸ್ಥಾನ ಕೊಟ್ಟಿತ್ತು. ಅವರ ಮೇಲೆ ನಾನು ದೊಡ್ಡ ಆಕಾಂಕ್ಷೆ ಇಟ್ಟುಕೊಂಡಿದ್ದೆ. ಪಕ್ಷ ಅವರ ಮೇಲೆ ಅವಲಂಬಿಸಿತ್ತು” ಎಂದು ತಿಳಿಸಿದರು.

“ನಿಷ್ಠಾವಂತ ಕಾರ್ಯಕರ್ತ ಪಕ್ಷಕ್ಕೆ ಸಿಗುವುದು ಬಹಳ ವಿಶೇಷ. ಈಗಲೂ ಕೂಡ ಅನೇಕ ವಿಚಾರಗಳನ್ನು ಅವರ ವಿಚಾರದಲ್ಲಿ ಚಿಂತನೆ ಮಾಡಲಾಗಿತ್ತು. ಎಐಸಿಸಿ ನಮ್ಮ ಕಾರ್ಯದರ್ಶಿಗಳಾಗಿ, ನಮ್ಮ ರಾಜ್ಯ ಮಟ್ಟದ ಪದಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರು” ಎಂದರು.

“ಅವರ ಕುಟುಂಬದ ದುಃಖ ನೋಡಲು ಆಗುತ್ತಿಲ್ಲ. ಅವರ ತಂದೆ ಕೂಡ ಒಬ್ಬ ಹಿರಿಯ ದೊಡ್ಡ ರಾಜಕಾರಣಿ. ವೈಯಕ್ತಿಕವಾಗಿ ನಮ್ಮೆಲ್ಲರಿಗೂ ಕೂಡ ಬಹಳ ದುಃಖ ಉಂಟಾಗಿದೆ. ಪಕ್ಷದ ಹಾಗೂ ಸರ್ಕಾರದ ಪರವಾಗಿ ಗೌರವ ನಮನ ಸಲ್ಲಿಸುತ್ತೇನೆ. ಕರ್ನಾಟಕ ಸರ್ಕಾರ ಅವರಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಗುವುದು. ಅವರ ಕುಟುಂಬದವರು ಅಂತಿಮ ಕಾರ್ಯ ಯಾವಾಗ ತೀರ್ಮಾನ ಮಾಡುತ್ತಾರೋ ಆಗ ಗೌರವವನ್ನು ಕೊಡುತ್ತೇವೆ. ಈ ವಿಚಾರವಾಗಿ ನಾನು ಈಗಾಗಲೇ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶ ತಿಳಿಸಿದ್ದೇನೆ. ಅವರ ಅಂತ್ಯಕ್ರಿಯೆಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ” ಎಂದರು.

Share This Article
";