ಶಿವಮೊಗ್ಗ, ಮೇ.30 : ಹೈಕೋರ್ಟ್ ಸಂಚಾರಿಪೀಠದ ಸಮಸ್ಯೆಯನ್ನು ಮುಕ್ತ ಚರ್ಚೆಯೊಡನೆ ಸರಕಾರ ಪರಿಹರಿಸಬೇಕು. ಇದಕ್ಕೆ ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದು ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.
ಜಿಲ್ಲಾ ವಕೀಲರ ಸಂಘದ ವತಿಯಿಂದ ಹೈಕೋರ್ಟ್ ಪೀಠಕ್ಕಾಗಿ ಶನಿವಾರ ಏರ್ಪಡಿಸಲಾಗಿದ್ದ ಜಾಥಾ ಮುಕ್ತಾಯವಾದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಬಸವಕೇಂದ್ರದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಹೈಕೋರ್ಟ್ ಸಂಚಾರಿ ಪೀಠಕ್ಕೆ ಶಿವಮೊಗ್ಗ ಪ್ರಶಸ್ಥ ಸ್ಥಳ. ಸುತ್ತಮುತ್ತಲ ಜಿಲ್ಲೆಯವರಿಗೆ ಮಧ್ಯವರ್ತಿ ಕೇಂದ್ರವಾಗಿದೆ. ಎಲ್ಲ ಜಿಲ್ಲೆಗಳಿಂದ ಸಂಪರ್ಕವಿದೆ. ಇಲ್ಲಿನ ಜನಸಂಖ್ಯೆ ಮತ್ತು ಅಹವಾಲಿಗನುಗುಣವಾಗಿ ಪೀಠವನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ. ಗೋಪಿನಾಥ ಮಾತನಾಡಿ, ಹೈಕೋರ್ಟ್ ಪೀಠ ನಮಗೆ ಅನುಕೂಲಕರ ಸ್ಥಳದಲ್ಲಿದ್ದರೆ ಒಳ್ಳೆಯದು. ಶಿವಮೊಗ್ಗದಿಂದ ಮಂಗಳೂರು ದೂರ. ಒಂದೇ ದಿನದಲ್ಲಿ ಸಂಚಾರ ಕಷ್ಟಸಾಧ್ಯ. ಶಿವಮೊಗ್ಗದವರು ಇಲ್ಲಿಯೇ ಪೀಠ ರಚನೆ ಆಗಬೇಕೆಂದು ಹೆಚ್ಚಿನ ಒತ್ತಡ ತರಬೇಕಿದೆ ಎಂದರು.
ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ಪ್ರ. ಕಾರ್ಯದರ್ಶಿ ಕೆ ವಿ ವಸಂತಕುಮಾರ್ ಮಾತನಾಡಿ, ನಮಗೆ ಮಂಗಳೂರಿಗಿಂತ ಶಿವಮೊಗ್ಗದಲ್ಲೇ ಪೀಠವಾಗಬೇಕು. ಜನಸಾಮಾನ್ಯರಿಗೆ ಅನುಕೂಲವಾಗಬೇಕು. ಜನಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ಹಿರಿಯ ನ್ಯಾಯವಾದಿ ಅಶೋಕ್ ಭಟ್ ಮಾತನಾಡಿ, ವಾಸ್ತವದಲ್ಲಿ ಮಂಗಳೂರು ಪೀಠಕ್ಕೆ ಶಿವಮೊಗ್ಗ ಸೇರಿಸುವುದು ಸರಿಯಲ್ಲ. ಮಂಗಳೂರಿನಿಂದ ಮತ್ತು ಶಿವಮೊಗ್ಗದಿಂದ ಹೈಕೋರ್ಟ್‌ಗೆ ಎಷ್ಟು ಕೇಸುಗಳು ಹೋಗುತ್ತಿವೆ ಎನ್ನುವುದನ್ನು ಪರಿಶೀಲಿಸಬೇಕು. ಕೇಸುಗಳ ಸಂಖ್ಯೆಯ ಆಧಾರದಲ್ಲಿ ಶಿವಮೊಗ್ಗಕ್ಕೆ ಕೊಡಲಿ. ಮೂರ್ನಾಲ್ಕು ಜಿಲ್ಲೆ ಸೇರಿಸಿದರೆ ಜನಸಂಖ್ಯೆಯೂ ಸಾಕಷ್ಟಾಗುವುದರಿಂದ ಹೆಚ್ಚಿನ ಕೇಸು ಲಭ್ಯವಾಗುತ್ತದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ್ರ ಸ್ವಾಮಿ ಮಾತನಾಡಿ, ಈ ಹೋರಾಟಕ್ಕಿಳಿಯುವ ಮುನ್ನ ಎಲ್ಲ ತಾಲೂಕುಗಳ ವಕೀಲರ ಸಮಿತಿಯನ್ನು ವಿಶ್ವಾಸಕ್ಕೆ ಪಡೆಯಲಾಗಿದೆ. ನಂತರ ಒಂದೊಂದೇ ಸಂಘಟನೆಗಳು ಕೈ ಜೋಡಿಸಿದವು. ವಕಿಲರು ತಮ್ಮ ದಿನನಿತ್ಯದ ಕಾರ್ಯದ ಹೊರತಾಗಿಯು ಪ್ರತಿನಿತ್ಯ ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಮಾಜಿ ಶಾಸಕ ಕೆ ಬಿ ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ, ಎಚ್ ಸಿ ಯೋಗೇಶ್, ದಸಂಸ ರಾಜ್ಯ ಸಂಚಾಲಕ ಎಂ ಗುರುಮೂರ್ತಿ, ರೈತ ಸಂಘದ ರಾಜ್ಯಾಧ್ಯಕ್ಷ ಎಚ್ ಆರ್. ಬಸವರಾಜಪ್ಪ. ಕೆ. ಇ. ಕಾಂತೇಶ್ ಮಾತನಾಡಿ, ಬೇಡಿಕೆ ಈಡೇರುವವರೆಗೂ ಈ ಹೋರಾಟ ಮುಂದುವರೆಯುತ್ತದೆ. ಎಲ್ಲ ಪಕ್ಷ, ಸಂಘಟನೆಗಳು ಸದಾ ಬೆಂಬಲಿಸುತ್ತಿವೆ. ಹೋರಾಟದ ಈ ಜಿಲ್ಲೆಯಲ್ಲಿ ಇನ್ನೊಂದು ಹೋರಾಟ ಆರಂಭವಾಗಿದ್ದು, ಅದು ಬೇಡಿಕೆ ಈಡೇರುವವರೆಗೂ ಚಾಲ್ತಿಯಲ್ಲಿರಲಿದೆ ಎಂದರು.
ಅಧ್ಯಕ್ಷತೆಯನ್ನು ಹಿರಿಯ ವಕೀಲ ಬಸಪ್ಪ ಗೌಡರು ವಹಿಸಿ ಮಾತನಾಡಿದರು. ನ್ಯಾಯವಾದಿ ಕೆ ಪಿ ಶ್ರೀಪಾಲ್ ಪ್ರಾಸ್ತಾವಿಕ ಮಾತನಾಡಿದರು.ನಂತರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆಗಮಿಸಿ ಮನವಿ ಸ್ವೀಕರಿಸಿದರು.
ಇದಕ್ಕೂ ಮುನ್ನ ಕೋರ್ಟ್ ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು. ಚೇಂಬರ್ ಆಫ್ ಕಾಮರ್ಸ್, ನಾಗರಿಕ ಹಿತರಕ್ಷಣಾ ವೇದಿಕೆ, ಜವುಳಿ ವರ್ತಕರ ಸಂಘ, ಡಿ ಎಸ್ ಎಸ್, ಜೈನ್ ವರ್ತಕರ ಸಂಘ, ಜಿಲ್ಲಾ ಒಕ್ಕಲಿಗರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ, ಅಸಂಘಟಿತ ಕಾರ್ಮಿಕರ ಸಂಘ, ಸಿಐಟಿಯು ಕಾರ್ಮಿಕರ ಸಂಘ, ಜಯ ಕರ್ನಾಟಕ ಜನಪರ ಹೋರಾಟ ವೇದಿಕೆ, ಜೆಸಿಐ, ರೋಟರಿ, ಮಲೆನಾಡು ಮುದ್ರಕರ ಸಂಘ, ದೀವರ ಕ್ಷೇಮಾಭಿವೃದ್ಧಿ ಸಂಘ, ಪ್ರೆಸ್ ಟ್ರಸ್ಟ್ ಸಹಿತ ಸುಮಾರು ೧೫ಕ್ಕ್ಕೂ ಹೆಚ್ಚು ಸಂಘಟನೆಗಳು ಇದರಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದವು.
