ಶಿವಮೊಗ್ಗ ಜೈಲಿನ ಗೋಡೆಗಳ ಆಚೆ ಮೊಳಗಿದ ಗಾನಸುಧೆ

Kranti Deepa

ಶಿವಮೊಗ್ಗಜೂ. 08 :  “ಅಪರಾಧವನ್ನು ದ್ವೇಷಿಸು, ಅಪರಾಧಿಯನ್ನಲ್ಲ” ಎಂಬ ಮಾನವೀಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಶಿವಮೊಗ್ಗ ಕೇಂದ್ರ ಕಾರಾಗೃಹ ಹಾಗೂ ಭದ್ರಾವತಿ ಆಕಾಶವಾಣಿ ಜಂಟಿಯಾಗಿ ಆಯೋಜಿಸಿದ್ದ “ಜೈಲು ಹಕ್ಕಿಗಳ ಗಾನಸುಧೆ” ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
ಜೂನ್ ತಿಂಗಳ ಪ್ರತಿ ಭಾನುವಾರ ಸಂಜೆ ಪ್ರಸಾರವಾಗಲಿರುವ ಈ ವಿನೂತನ ಕಾರ್ಯಕ್ರಮದ ಮೊದಲ ಸಂಚಿಕೆ ಯಶಸ್ವಿಯಾಗಿ ಪ್ರಸಾರಗೊಂಡಿದ್ದು, ಬಂದಿ ಕಲಾವಿದರ ಗಾಯನ ಹಾಗೂ ಅವರ ಜೀವನಾನುಭವಗಳು ಶ್ರೋತೃಗಳ ಮನಸೂರೆಗೊಂಡಿವೆ.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದ 20 ಮಂದಿ ಪ್ರತಿಭಾವಂತ ಬಂದಿಗಳು ತಮ್ಮ ಸುಮಧುರ ಗಾಯನದ ಮೂಲಕ ಶ್ರೋತೃಗಳನ್ನು ರಂಜಿಸಿದರು. ಜೊತೆಗೆ ತಮ್ಮ ಜೀವನದ ಪಯಣ, ತಪ್ಪುಗಳಿಂದ ಕಲಿತ ಪಾಠಗಳು, ಮನಃಪರಿವರ್ತನೆಯ ಅನುಭವಗಳು ಹಾಗೂ ಭವಿಷ್ಯದ ಕನಸುಗಳನ್ನು ಹಂಚಿಕೊಂಡರು. ಅವರ ಮಾತುಗಳು ಮತ್ತು ಹಾಡುಗಳು ಸಮಾಜದಲ್ಲಿ ಹೊಸ ಚಿಂತನೆಗೆ ನಾಂದಿ ಹಾಡಿದವು.

ಜೈಲು ಎಂದರೆ ಕೇವಲ ಶಿಕ್ಷೆಯ ಸ್ಥಳವಲ್ಲ, ವ್ಯಕ್ತಿಯ ಪರಿವರ್ತನೆ ಮತ್ತು ಪುನರ್ವಸತಿಗೆ ಅವಕಾಶ ಕಲ್ಪಿಸುವ ತಾಣ ಎಂಬ ಸಂದೇಶ ಕಾರ್ಯಕ್ರಮದ ಮೂಲಕ ಪರಿಣಾಮಕಾರಿಯಾಗಿ ಮೂಡಿಬಂದಿತು. ಸಂಗೀತವನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಮರಳಲು ಪ್ರಯತ್ನಿಸುತ್ತಿರುವ ಬಂದಿಗಳಲ್ಲಿನ ಮಾನವೀಯತೆ ಮತ್ತು ಪ್ರತಿಭೆಯನ್ನು ಜನರ ಮುಂದೆ ಪರಿಚಯಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ.

ಕಾರ್ಯಕ್ರಮದ ಬಗ್ಗೆ ಹಲವಾರು ಶ್ರೋತೃಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಬಂದಿಗಳ ಬಗ್ಗೆ ಸಮಾಜದಲ್ಲಿರುವ ನಕಾರಾತ್ಮಕ ಮನೋಭಾವವನ್ನು ಬದಲಾಯಿಸಲು ನೆರವಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲೇ ಮೊದಲ ಬಾರಿಗೆ ಜೈಲು ಬಂದಿಗಳಿಗೆ ಆಕಾಶವಾಣಿಯ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಅವಕಾಶ ಕಲ್ಪಿಸಿರುವ ಈ ಕಾರ್ಯಕ್ರಮ, ಕಾರಾಗೃಹ ಸುಧಾರಣಾ ವ್ಯವಸ್ಥೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಮುಂದಿನ ಸಂಚಿಕೆಗಳಲ್ಲೂ ಇನ್ನಷ್ಟು ಪ್ರತಿಭಾವಂತ ಬಂದಿಗಳ ಗಾಯನ ಹಾಗೂ ಜೀವನಾನುಭವಗಳು ಶ್ರೋತೃಗಳನ್ನು ತಲುಪಲಿವೆ.

  “ಕಾರಾಗೃಹಕ್ಕೆ ಬಂದ ಪ್ರತಿಯೊಬ್ಬ ವ್ಯಕ್ತಿಯೂ ಅಪರಾಧಿಯಾಗಿ ಉಳಿಯಬೇಕೆಂದಿಲ್ಲ. ಸೂಕ್ತ ಮಾರ್ಗದರ್ಶನ, ಶಿಕ್ಷಣ, ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಅವರಲ್ಲಿ ಮನಃಪರಿವರ್ತನೆ ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರಬಹುದು. ’ಜೈಲು ಹಕ್ಕಿಗಳ ಗಾನಸುಧೆ’ ಕಾರ್ಯಕ್ರಮವು ಬಂದಿಗಳಲ್ಲಿರುವ ಪ್ರತಿಭೆಯನ್ನು ಹೊರಜಗತ್ತಿಗೆ ಪರಿಚಯಿಸುವುದರ ಜೊತೆಗೆ, ಅವರಲ್ಲಿ ಆತ್ಮವಿಶ್ವಾಸ ಮತ್ತು ಹೊಸ ಬದುಕಿನ ಆಶಾಭಾವನೆ ಮೂಡಿಸುವ ಪ್ರಯತ್ನವಾಗಿದೆ.
–  ರಂಗನಾಥ್, ಮುಖ್ಯ ಅಧೀಕ್ಷಕ

Share This Article
";