ಶಿವಮೊಗ್ಗ, ಮೇ .26 : ನಗರ ಪಾಲಿಕೆಯಲ್ಲಿ ಸರಕಾರದ ಸುತ್ತೋಲೆಗೆ ವಿರುದ್ಧವಾಗಿ ’ಖಾತೆ ಬದಲಾವಣೆ ಶುಲ್ಕ’ ಹೆಸರಿನಲ್ಲಿ ಬಾರಿ ಸುಲಿಗೆ ನಡೆಸಲಾಗುತ್ತಿದೆ. ಲಿಖಿತ ಮನವಿ ಪಾಲಿಕೆಯ ಆಯುಕ್ತರಿಗೆ ನೀಡಿದ ಮೇಲೂ ಸುಲಿಗೆ ಮುಂದುವರೆದಿರುವುದು ಖಂಡನೀಯ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಪ್ರ. ಕಾರ್ಯದರ್ಶಿ ಕೆ ವಿ ವಸಂತಕುಮಾರ್ ಮತ್ತು ಸಂಘಟನಾ ಕಾರ್ಯದರ್ಶಿ ಸತೀಶ್ ಕುಮಾರ್ ಶೆಟ್ಟಿ ಒತ್ತಾಯಿಸಿದ್ದಾರೆ.
ಪ್ರೆಸ್ ಟ್ರಸ್ಟಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆವರು, ಈ ವಿಚಾರದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಹತ್ತು ಹಲವು ಬಾರಿ ಆಯುಕ್ತರಿಗೆ ತಿಳಿಸುತ್ತಾ ಬಂದಿದ್ದರೂ ತಾವು ಸರಿಪಡಿಸುತ್ತೇನೆ ಎಂಬ ಭರವಸೆ ನೀಡಿದರು. ಆದರೆ, ಪಾಲಿಕೆಯ ಆಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರಕಾರ ಈ ವರ್ಷದ ಜನವರಿ 30 ರಂದು ನೋಂದಾವಣೆ ಆದ ಆಸ್ತಿಯ ಮುದ್ರಾಂಕ ಶುಲ್ಕದ ಮೇಲೆ 2 % ಖಾತೆ ಬದಲಾವಣೆ ಶುಲ್ಕ ತೆಗೆದು ಕೊಳ್ಳಬೇಕು ಎನ್ನುವ ಸ್ಪಷ್ಟ ಸುತ್ತೋಲೆಯನ್ನು ನೀಡಿದೆ ಈ ಬಗ್ಗೆ ಫೆ. 19 ರಂದು ಮತ್ತೊಮ್ಮೆ ಸುತ್ತೋಲೆ ನೀಡಿ ಮುದ್ರಾಂಕ ಶುಲ್ಕದ ಮೇಲೆ 2 % ಖಾತೆ ಬದಲಾವಣೆ ಶುಲ್ಕ ತೆಗೆದುಕೊಳ್ಳಬೇಕು ಎಂದು ಸೂಚಿಸಿರುವುದನ್ನು ವಿವರಿಸಿದರು.
ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಎಲ್ಲಾ ಮಹಾ ನಗರ ಪಾಲಿಕೆಗಳಿಗೆ ಈ ಅಧಿಸೂಚನೆ ಕಳುಹಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಆಸ್ತಿಯ ಮೌಲ್ಯದ ಮೇಲೆ ಶೇಕಡಾ 0.5 % ಖಾತೆ ಬದಲಾವಣೆ ಶುಲ್ಕವನ್ನು ಶಿವಮೊಗ್ಗ ಪಾಲಿಕೆ ಯಲ್ಲಿ ಮಾತ್ರ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಎ. 24 ರಂದು ವೇದಿಕೆ ಆಯುಕ್ತರಿಗೆ ಮನವಿ ಲಿಖಿತ ರೂಪದಲ್ಲಿ ನೀಡಿದೆ. ಮನವಿ ನೀಡಿದ ಮೇಲೂ ಪಾಲಿಕೆಯವರು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಈ ರೀತಿ ಅಧಿಕ ಶುಲ್ಕದ ಅನೇಕ ಉದಾಹರಣೆ ತಮ್ಮಲ್ಲಿದೆ.
ಹೀಗೆ ಶೇಕಡಾ 446% ಅಧಿಕ ಶುಲ್ಕ ವಸೂಲಿ ಪಾಲಿಕೆ ಆಯುಕ್ತರಿಗೆ ಗೊತ್ತಿದೆ ಗೊತ್ತಿದ್ದರೂ ಕ್ರಮ ಕೈಗೊಳ್ಳಲ್ಲ ಅಂದ್ರ ಖಾತೆದಾರರಿಂದ ಹಗಲು ದರೋಡೆ ಅಲ್ಲದೇ ಮತ್ತೆ ಏನು ಎಂದು ಪ್ರಶ್ನಿಸಿದರು.
ತಕ್ಷಣ ಈ ಕಾನೂನು ಬಾಹಿರ ವಸೂಲಿ ತಕ್ಷಣ ನಿಲ್ಲಿಸಬೇಕು. ಖಾತೆದಾರರಿಂದ ಪಡೆದ ಅಧಿಕ ಖಾತೆ ಬದಲಾವಣೆ ಶುಲ್ಕ ಸುಮಾರು 25 ಕೋಟಿಗೂ ಹೆಚ್ಚು ಹಿಂದಿರುಗಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು. ಕಾನೂನುಬಾಹಿರ ಶುಲ್ಕ ವಸೂಲಿಗೆ ಕಾರಣರಾದ ಪಾಲಿಕೆ ಆಯುಕ್ತ ಮತ್ತು ಕಂದಾಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ಮತ್ತು ಶಿವಮೊಗ್ಗ ಶಾಸಕರು ನಗರದ ನಾಗರೀಕರಿಗೆ ಆಗುತ್ತಿರುವ ಅನ್ಯಾಯ ತಡೆದು ನಾಗರೀಕರಿಗೆ ನ್ಯಾಯ ಒದಗಿಸಲು, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಎಸ್.ಆರ್.ಗೋಪಾಲ್, ಕಾರ್ಯದರ್ಶಿ ಎಸ್.ಪಿ. ಅಶೋಕ್‌ಕುಮಾರ್, ಜನಮೇಜಿರಾವ್, ಚನ್ನವೀರಪ್ಪ ಗಾಮನಗಟ್ಟಿ, ಸುಬ್ರಹ್ಮಣ್ಯ, ಹೊಳೆಮಡಿಲು ವೆಂಕಟೇಶ್, ಸೀತಾರಾಮ, ಭಾಸ್ಕರ್ ಶೆಟ್ಟಿ ಹಾಜರಿದ್ದರು.
ಇದು ಭ್ರಷ್ಟಾಚಾರದ ಕೂಪವಾಗಿದೆ. ಆದ್ದರಿಂದ ತಕ್ಷಣವಾಗಿ ಕಾನೂನುಬಾಹಿರ ವಸೂಲಿ ಹಣವನ್ನು ನಿಲ್ಲಿಸಬೇಕು. ಮತ್ತು ಇದುವರೆಗೂ ಅಧಿಕ ಶುಲ್ಕ ವಸೂಲಿ ಮಾಡಿದ ಪಾಲಿಕೆ ಆಯುಕ್ತರುಗಳು ಹಾಗೂ ಕಂದಾಯ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಈ ಹಗಲು ದರೋಡೆಯನ್ನು ನಿಲ್ಲಿಸಬೇಕು ಎಂದರು. ಈಗಾಗಲೇ ಅಧಿಕ ಶುಲ್ಕ ಕಟ್ಟದವರು ನಮ್ಮ ನಾಗಲೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟಕ್ಕೆ ಚಲನ್ ನಂ. ಸಮೇತ ವಿವರಗಳನ್ನು ನೀಡಬೇಕು. ನಾವು ಮುಂದೆ ಕಾನೂನು ಹೋರಾಟ ಮಾಡಲು ಇದು ಅನುಕೂಲವಾಗುತ್ತವೆ.
-ಸತೀಶ್‌ಕುಮಾರ್ ಶೆಟ್ಟಿ
