ಭದ್ರಾವತಿ, ಜೂ.01 : ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿರುವ ಎಪಿಎಂಸಿ ಮಾಜಿ ನಿರ್ದೇಶಕಿ ಸುಜಾತ ಎಂಬುವರ ಟಿವಿಎಸ್ ಫಾರಂನಲ್ಲಿ ಭಾನುವಾರ ರಾತ್ರಿ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಇದೇ ತೋಟದಲ್ಲಿ ಕಳೆದ ಆರೇಳು ತಿಂಗಳ ಹಿಂದೆಯೂ ಇದೇ ರೀತಿಯಲ್ಲಿ ಸಾಕು ನಾಯಿಯನ್ನು ಚಿರತೆ ಹೊತ್ತು ಹೋಗಿತ್ತು. ಈಗ ಎರಡನೇ ಬಾರಿ ಘಟನೆ ನಡೆದಿದೆ.
ಚಿರತೆಯು ನಾಯಿಯನ್ನು ಹೊತ್ತು ಹೋಗುವ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಕಂಡು ಬಂದಿದೆ. ತೋಟದಲ್ಲಿ ಸುಜಾತಾ ತಮ್ಮ ರಕ್ಷಣೆಗಾಗಿ ದೊಡ್ಡ ಹೆಣ್ಣು ಕರಿ ನಾಯಿಯನ್ನು ಮತ್ತು ನಾಲ್ಕು ಮರಿನಾಯಿಗಳು ಹಾಗೂ ನಾಲ್ಕು ಬೆಕ್ಕುಗಳನ್ನು ಅತೀ ಪ್ರೀತಿಯಿಂದ ಸಾಕುತ್ತಿದ್ದರು. ರಾತ್ರಿ 8.30 ಕ್ಕೆ ಈ ಪ್ರಾಣಿಗಳಿಗೆಲ್ಲಾ ಅನ್ನ ಹಾಲು ಹಾಕಿ ಹೋಗಿದ್ದರು. ಪ್ರತಿದಿನದಂತೆ ಬೆಳಗ್ಗೆ ಎದ್ದು ವಾಕಿಂಗ್ ಹೋಗಲು ಸಿದ್ದರಾಗಿ ಹೊರಗಡೆ ಬಂದು ನೋಡಿದರೆ ಎರಡು ಮರಿನಾಯಿಗಳು ಮಾತ್ರ ಇದ್ದವು. ಅನುಮಾನ ಬಂದು ಸಿಸಿ ಕ್ಯಾಮರಾ ಪುಟ್ಯೇಜ್ ತೆಗೆದು ನೋಡಿದರೆ ಬೆಳಗ್ಗಿನ ಜಾವ 2.03 ನಿಮಿಷದಲ್ಲಿ ಒಂದು ದೊಡ್ಡ ಚಿರತೆ ಬಂದು ನಾಯಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗುವ ದೃಶ್ಯ ಕಂಡುಬಂದಿದೆ.
ಇದೇ ರೀತಿಯಲ್ಲಿ ಈ ಹಿಂದೆಯೂ ಚಿರತೆಯೊಂದು ನಾಲ್ಕು ನಾಯಿ ಮತ್ತು ಮೂರು ಬೆಕ್ಕು ಹಿಡಿದು ತಿಂದ ದೃಶ್ಯವು ಕಂಡು ಬಂದಿತ್ತು. ಅರಣ್ಯ ಇಲಾಖೆಗೆ ದೂರು ನೀಡಲಾಗಿ ಅರಣ್ಯ ಇಲಾಖೆಯು ಬೋನು ಇಟ್ಟು ಸಹಾ ಪ್ರಯೋಜನವಾಗಿಲ್ಲ. ತೋಟದ ವಾಸಿ ಸುಜಾತ ಮತ್ತಿತರೆ ಗ್ರಾಮಸ್ಥರು ಪ್ರಾಣ ಕೈಲಿ ಹಿಡಿದು ಭಯದಲ್ಲಿ ಬದುಕು ನಡೆಸುವಂತಾಗಿದೆ.
ಆದ್ದರಿಂದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತವು ಎಚ್ಚೆತ್ತುಕೊಂಡು ಮುಂದೆ ಆಗಬಹುದಾದ ಅನಾಹುತ ಸಾವು ನೋವನ್ನು ತಡೆಯಲು ಕೂಡಲೇ ಕ್ರಮಕ್ಕೆ ಮುಂದಾಗಬೇಕು. ನಮಗೆ ಸೂಕ್ತ ಪ್ರಾಣ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
