ಬೆಂಗಳೂರು,ಮೇ .30 : ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ ಶಿವಕುಮಾರ್ ಅವರು ಆಯ್ಕೆಯಾದರು.ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಸಂಜೆ 4 ಗಂಟೆಗೆ ನಡೆದ ಮಹತ್ವದ ಸಭೆಯಲ್ಲಿ ನಿಯಮದಂತೆ ಮುಖ್ಯಮಂತ್ರಿಗಳ ರಾಜೀನಾಮೆ ಬಳಿಕ ಹೊಸ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಿತು. ಸಿಎಂ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಸೂಚಿಸಿದ್ದು, ಅದರಂತೆ ಆಯ್ಕೆ ಮಾಡಲಾಯಿತು.
ಗೃಹ ಸಚಿವರ ಡಾ. ಜಿ ಪರಮೇಶ್ವರ್ ಅವರು ಶಾಸಕಾಂಗ ಪಕ್ಷದ ನೂತನ ನಾಯಕರನ್ನು ಅನುಮೋದಿಸುತ್ತಿದ್ದಂತೆ ಸಭೆಯ ಎಲ್ಲ ಸದಸ್ಯರು ಒಕ್ಕೊರಲಿನಿಂದ ಬೆಂಬಲಿಸಿದರು. ಸಭೆಯ ಆರಂಭಕ್ಕೂ ಮುನ್ನ ಸಾಂವಿಧಾನಿಕ ನಿಯಮಗಳಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಪ್ರಕ್ರಿಯೆಯು ಸಿಎಂ ಸಿದ್ದರಾಮಯ್ಯ ಅವರ ಪ್ರಸ್ತಾವನೆಯೊಂದಿಗೆ ನಡೆಯಲಿದೆ ಎಂದು ಎಐಸಿಸಿ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪ್ರಕಟಿಸಿ ಚಾಲನೆ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ವಿಚಾರವನ್ನು ಎಐಸಿಸಿ ವಿವೇಚನೆಗೆ ಬಿಡಲಾಗಿದೆ ಎಂಬ ಒಂದು ಸಾಲಿನ ನಿರ್ಣಯ ಮಂಡಿಸಿದರು. ಆಯ್ಕೆ ಅನುಮೋದಿಸುತ್ತಿದ್ದಂತೆ ಎಲ್ಲ ಶಾಸಕರು ಕೈ ಎತ್ತುವ ಮೂಲಕ ಡಿ.ಕೆ. ಶಿವಕುಮಾರ್ ಅವರ ಆಯ್ಕೆಯನ್ನು ಬೆಂಬಲಿಸಿದರು. ಬಳಿಕ ಸುರ್ಜೇವಾಲ ಅವರು ಹತ್ತು ನಿಮಿಷಗಳ ವಿರಾಮ ಘೋಷಿಸಿದರು.
ಆಯ್ಕೆ ಪ್ರಕ್ರಿಯೆ ಹೇಗಿತ್ತು?
ಸುಮಾರು 10 ನಿಮಿಷಗಳ ವಿರಾಮದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆ ವಾಲ ಅವರು ಸಿಎಂ ಕೊಠಡಿಗೆ ತೆರಳಿದರು. ಅಲ್ಲಿಂದ ಸಮ್ಮೇಳನ ಸಭಾಂಗಣಕ್ಕೆ ಮೂವರು ವಾಪಸ್ಸು ಬಂದ ನಂತರ ಶಾಸಕಾಂಗ ಪಕ್ಷದ ನೂತನ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದರು. ಡಿ.ಕೆ.ಶಿವಕುಮಾರ್ ಅವರು ನಿರ್ಗಮಿತ ನಾಯಕ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಯ ಕಾರ್ಯವೈಖರಿಯನ್ನು ಕೊಂಡಾಡಿದರು. ಬಳಿಕ ನಿರ್ಣಯ ಮಂಡಿಸಿ, ಸಭೆಯ ಬೆಂಬಲ ಕೋರಿದರು. ಸಭೆ ಒಕ್ಕೋರಲಿನಿಂದ ಬೆಂಬಲಿಸಿತು. ನಂತರ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಅಭಿನಂದನೆ ಸಲ್ಲಿಸಿದರು.
