ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ?

Kranti Deepa
ಚೆನ್ನೈ,ಜೂ.01 : ಕರ್ನಾಟಕ ಕೆಡರ್‌ನ ಮಾಜಿ ಐಪಿಎಸ್ ಅಕಾರಿ ಕೆ. ಅಣ್ಣಾಮಲೈ, ಬಿಜೆಪಿ ತೊರೆಯಲಿದ್ದಾರೆ; ಮಂಗಳವಾರ ಅವರು ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ.
ಆ ಮೂಲಕ ಪಕ್ಷದೊಂದಿಗಿನ ಅವರ ೬ ವರ್ಷಗಳ ಸಖ್ಯ ಕೊನೆಗೊಳ್ಳಲಿದೆ.ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಮಾಜಿ ಅಧ್ಯಕ್ಷರೂ ಆಗಿರುವ ಅಣ್ಣಾಮಲೈ, ಮಂಗಳ ವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವಿನ್ ಹಾಗೂ ಇನ್ನಿತರ ನಾಯಕರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿದ್ದಾರೆ. ತಮ್ಮ ನಿರ್ಧಾರಕ್ಕೆ ಕಾರಣವನ್ನೂ ವಿವರಿಸಲಿದ್ದಾರೆ.
ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಅಭಿಮಾನಿಗಳು ಹಾಗೂ ಬೆಂಬಲಿಗರೊಂದಿಗೆ ಮುಂದಿನ ದಿನಗಳಲ್ಲಿ ಚರ್ಚಿಸಲಿದ್ದಾರೆ.ಅಣ್ಣಾಮಲೈ ಯವರು ಮಂಗಳವಾರ ದೆಹಲಿಯಲ್ಲಿ ಇರಲಿದ್ದು, ಆರು ವರ್ಷಗಳಲ್ಲಿ ತಮಗೆ ನೀಡಿದ ಅವಕಾಶಕ್ಕೆ ಧನ್ಯವಾದ ಅರ್ಪಿಸಲಿದ್ದಾರೆ. ಇದು ಸೌಜನ್ಯದ ಭೇಟಿಯಷ್ಟೇ ಎಂದು ಮೂಲಗಳು ಹೇಳಿವೆ.
ಇತ್ತೀಚೆಗೆ ಕೊನೆಗೊಂಡ ತಮಿಳುನಾಡು ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಅವರು ಅಸಮಾಧಾನಿತರಾಗಿದ್ದರು.ಇತ್ತೀಚಿನ ಚುನಾವಣೆಯಲ್ಲಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಭರ್ಜರಿ ಸಾಧನೆ ತೋರಿದ ಬಳಿಕ, ತಮಿಳುನಾಡಿನಲ್ಲಿ ರಾಜಕೀಯ ಚಿತ್ರಣವೇ ಬದಲಾಗಿದೆ ಎಂದು ಅಣ್ಣಾಮಲೈ ನಂಬಿದ್ದಾರೆ. ತಮ್ಮ ಭಾಷೆ ಮಾತನಾಡುವ, ತಮ್ಮ ಆಶೋತ್ತರಗಳಿಗೆ ಹೋರಾಡುವ ರಾಜಕೀಯ ನಾಯ ಕರು ಬೇಕು ಎಂದು ಯುವಕರು ಬಯಸುತ್ತಾರೆ. ರಾಷ್ಟ್ರೀಯ ಪಕ್ಷಗಳಿಗೆ ಅವಕಾಶ ಕಡಿಮೆಯಾಗುತ್ತಿದೆ ಎನ್ನುವುದನ್ನು ಈ ಫಲಿತಾಂಶ ತೋರಿಸಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
ಹೊಸ ಪಕ್ಷ ಸ್ಥಾಪಿಸಲು ಅಣ್ಣಾಮಲೈ ಆತುರ ತೋರರು. ತಮ್ಮ ಬೆಂಬಲಿಗರೊಂದಿಗೆ ಮುಂದಿನ ನಡೆ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮತ್ತೊಂದು ಮೂಲ ತಿಳಿಸಿದೆ.
ಹೊಸ ಪಕ್ಷ ಸ್ಥಾಪನೆ ಊಹಾಪೋಗಳನ್ನು ತಳ್ಳಿಹಾಕಲು ನಿರಾಕರಿಸಿದ ಅಣ್ಣಾಮಲೈ ಎರಡು ದಿನ  ಕಾಯಿರಿ. ಮಾತನಾಡುತ್ತೇವೆ ಎಂದು ಹೇಳಿರುವುದು  ತಮಿಳುನಾಡು ರಾಜಕೀಯ ವಲಯಗಳಲ್ಲಿನ ತೀವ್ರ ಊಹಾಪೋಹಗಳ ಹುಟ್ಟುಹಾಕಿದೆ.ಅಣ್ಣಾಮಲೈ ಹುಟ್ಟುಹಬ್ಬದ ಮೊದಲು ಕೊಯಮತ್ತೂರಿನಾದ್ಯಂತ ಅವರ ಬೆಂಬಲಿಗರು ಹಾಕಿರುವ ಬೃಹತ್ ಪೋಸ್ಟರ್‌ಗಳಿಂದ ಈ ಊಹಾಪೋಹಗಳು ಮತ್ತಷ್ಟು ಬಲಗೊಂಡಿವೆ. ನಮ್ಮ ನಾಯಕ, ಬನ್ನಿ ಮತ್ತು ನಮ್ಮನ್ನು ಮುನ್ನಡೆಸಿ ಎಂಬ ಘೋಷಣೆಗಳನ್ನು ಹೊಂದಿರುವ ಪೋಸ್ಟರ್‌ಗಳು ನಗರದ ಪ್ರಮುಖ ಸ್ಥಳಗಳಲ್ಲಿ ಕಾಣಿಸಿಕೊಂಡಿವೆ. ಅಲ್ಲದೆ ಬೆಂಬಲಿಗರು ಇದನ್ನು ಶಕ್ತಿ ಪ್ರದರ್ಶನವೆಂದು ವ್ಯಾಪಕವಾಗಿ ವ್ಯಾಖ್ಯಾನಿಸಿದ್ದಾರೆ.

Share This Article
";