ರಾಜ್ಯಸಭೆ ಟಿಕೆಟ್‌ಗೆ ಗೌಡರು ಅರ್ಜಿ ಹಾಕಿರಲಿಲ್ಲ : ಹೆಚ್‌ಡಿಕೆ

Kranti Deepa
ಮಂಡ್ಯ,ಜೂ.09 : ರಾಜ್ಯಸಭೆ ಟಿಕೆಟ್‌ಗೆ ದೇವೇ ಗೌಡರು ಅರ್ಜಿಯೇ ಹಾಕಿಲ್ಲ. ಆದರೆ ಕಾಂಗ್ರೆಸ್ ನಾಯಕರಿಗೆ ಗೌಡರ ಬಗ್ಗೆ ಅತಿಯಾದ ಅನುಕಂಪ ಬಂದಿದೆ. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಯಲ್ಲಿ ಬಿರುಕು ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಗ್ಗಹಳ್ಳಿ ಗ್ರಾಮದಲ್ಲಿ ಸಿಎಸ್‌ಆರ್ ನಿ ಅನುದಾನದಿಂದ ನೂತನವಾಗಿ ನಿರ್ಮಾಣ ಗೊಂಡಿರುವ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.ದೇವೇಗೌಡರದ್ದು ಹೋರಾಟದ ಬುದಕು. ಅಕಾರಕ್ಕಾಗಿ ಹಪಾಹಪಿಸಿ ದವರಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದರು. ಅದೆಲ್ಲವೂ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿಲ್ಲವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಕಳೆದ ಬಾರಿ ದೇವೇಗೌಡರ ವಿರುದ್ಧ ಇನ್ನೊಬ್ಬ ಅಭ್ಯರ್ಥಿ ನಿಲ್ಲುವ ಅವಕಾಶ ಇರಲಿಲ್ಲ. ಆ ಸಂದರ್ಭದಲ್ಲಿ ಯಾವುದೇ ಪಕ್ಷಕ್ಕೆ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವಷ್ಟು ಸಂಖ್ಯಾಬಲ ಇರಲಿಲ್ಲ. ನಮ್ಮ ಪಕ್ಷಕ್ಕೆ ಸಂಖ್ಯಾಬಲ ಇತ್ತು. ಹೀಗಾಗಿ ರಾಜ್ಯಸಭೆಗೆ ದೇವೇಗೌಡರು ಆಯ್ಕೆಯಾದರು. ಅವರು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಹೋಗಲಿಲ್ಲ ಎಂದು ತಿರುಗೇಟು ನೀಡಿದರು.
ಫೋಟೊಶೂಟ್‌ಗಾಗಿ ಸಿಎಂ ಭೇಟಿ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ಕೇಳಲು ಎಚ್‌ಡಿಕೆ ಭೇಟಿಯಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನೇನು ಸಲಹೆ ನೀಡಲಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿ ಏನು ಹರಿದಿದ್ದಾರೆ ಎಂದು ನನ್ನನ್ನು ಈ ಹಿಂದೆ ಟೀಕಿಸಿದ್ದಾರೆ. ಎಲ್ಲದಕ್ಕೂ ಸಾಕ್ಷಿ ಗುಡ್ಡೇ ಕೇಳುತ್ತಾರೆ. ನಾನೇನು ಹರಿದಿಲ್ಲ, ನನ್ನ ಬಳಿ ಬಂದು ಏನು ಸಲಹೆ ಕೇಳುತ್ತಾರೆ. ಅವರಿಗೆ ಫೋಟೊ ಬೇಕು. ಹೀಗಾಗಿ ಎಲ್ಲ ಕಡೆ ಹೋಗುತ್ತಿದ್ದಾರೆ. ಎಲ್ಲವನ್ನೂ ನಾನು ಬಲ್ಲೆ. ‘ಅತಿ ವಿನಯಂ ಧೂರ್ತ ಲಕ್ಷಣಂ’ ಅಂತ. ಆ ಮಾತು ನನಗೆ ಪದೇಪದೇ ನೆನಪಿಗೆ ಬರುತ್ತಿದೆ ಎಂದು ಕುಟುಕಿದರು.

Share This Article
";