ಶಿವಮೊಗ್ಗ,ಅ.27 : ಪ್ರತಿಫಲ ಇಲ್ಲದೆ ಕೆಲಸ ಮಾಡಿದರೆ ಮತ್ತು ನೈಜ ಹೋರಾಟದಿಂದ ಸ್ಥಾನಮಾನ, ಗೌರವವನ್ನು ಪಡೆಯಲು ಸಾಧ್ಯ ಎಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ, ಕನ್ನಡ ಪ್ರಭದ ಸಂಪಾದಕ (ಸಮನ್ವಯ) ಬಿ ವಿ ಮಲ್ಲಿಕಾರ್ಜುನಯ್ಯ ಅಭಿಪ್ರಾಯಪಟ್ಟಿದ್ದಾರೆ.
2021 ರ ಸಾಲಿನ ಮೊಹರೆ ಹಣಮಂತರಾಯ ಪತ್ರಿಕಾ ಪ್ರಶಸ್ತಿಗೆ ಭಾಜನಾದ ಕ್ರಾಂತಿದೀಪ ಪತ್ರಿಕೆ ಮತ್ತು 2024 ರ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಕನ್ನಡ ಮೀಡಿಯಂ ವಾಹಿನಿಯ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ಅವರಿಗೆ ಅವರು ಭಾನುವಾರ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಮಾಡಿ ಮಾತನಾಡಿದರು.
ಎನ್. ಮಂಜುನಾಥ್ ಅವರು ವ್ಯಕ್ತಿಯಾಗಿ ಕೆಲಸ ಮಾಡದೆ ಶಕ್ತಿಯಾಗಿ ಕೆಲಸ ಮಾಡಿದವರು. ಕ್ರಾಂತಿಯೊಂದಿಗೆ ದೀಪ ಬೆಳಗಿಸಿದವರು. ನೂರಾರು ಪತ್ರಿಕೋದ್ಯಮ ಮನಸುಗಳಿಗೆ ಆಶ್ರಯ ನೀಡಿ ಅವರಲ್ಲಿ ಪತ್ರಿಕೋದ್ಯಮದ ದೀಪ ಹಚ್ಚಿದವರು ಜೊತೆಗೆ ಅವರ ಆಲೋಚನೆಗಳಿಗೆ ಮಾರ್ಗದರ್ಶನ ಮಾಡಿದವರು ಎಂದು ಶ್ಲಾಘಿಸಿದರು.
ಸಂಘಟನೆ ಮತ್ತು ಹೋರಾಟದ ಮೂಲಕ ಪತ್ರಿಕೆಯನ್ನು ಕಟ್ಟಿದ ಮಂಜುನಾಥ್, ಯಾವತ್ತ್ತೂ ಇನ್ನೊಬ್ಬರಿಗೆ ತೊಂದರೆ ಆಗದಂತೆ ಕೆಲಸ ಮಾಡಿದವರು. ಮಾದರಿ ಕೆಲಸ, ಅಪೂರ್ವ ಸ್ನೇಹ, ಮನಃಸ್ಸಾಕ್ಷಿ ಮೂಲಕ ಕೆಲಸ ಮಾಡಿ ಜನಮನ ಗೆದ್ದವರು. ಯಾವುದೇ ಸ್ಥಾನಮಾನವನ್ನು ಅವರು ಬಯಸಲಿಲ್ಲ. ಆದರೆ ಅವರ ಕೆಲಸದ ಮೂಲಕ ಹಲವು ಸ್ಥಾನಮಾನಗಳು ಹುಡುಕಿಕೊಂಡು ಬಂದಿವೆ. ಯಾರಿಗೂ ಅನ್ಯಾಯ ಮಾಡದೆ, ದಿವಂಗತ ಪತ್ರಕರ್ತ ಮಿಂಚು ಶ್ರೀನಿವಾಸ್ ಆದರ್ಶಗಳನ್ನು ಮೈಗೂಡಿಸಿಕೊಂಡು ಕ್ರಾಂತಿದೀಪ ಪತ್ರಿಕೆಯನ್ನು ಪ್ರಾದೇಶಿಕ ಪತ್ರಿಕೆಯನ್ನಾಗಿ ಕಟ್ಟುವಲ್ಲಿ ಅವರು ವಹಿಸಿದ ಶ್ರಮ ಅಪಾರವಾದದ್ದು ಎಂದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್‌ಗೆ ಸ್ವಂತವಾದ ಬೃಹತ್ ಕಟ್ಟಡ ಕಟ್ಟುವಲ್ಲಿ ಮತ್ತು ಪತ್ರಿಕಾ ಸಂಘಟನೆಯನ್ನು ಬಲಿಷ್ಠವಾಗಿ ನಿರ್ಮಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಸಂಘಟನೆ ಮತ್ತು ಹೋರಾಟ ಮೂಲಕ ಮೇಲೆ ಬಂದು ಇವತ್ತಿಗೂ ಪತ್ರಿಕಾ ಮಾಧ್ಯಮದಲ್ಲಿ ಹೋರಾಟವನ್ನು ಮಾಡುತ್ತಿದ್ದಾರೆ ಎಂದರು.
ಹೊನ್ನಾಳಿ ಚಂದ್ರಶೇಖರ್ ಕುರಿತು ಮಾತನಾಡಿದ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ಸಂತೋಷ್ ಕಾಚಿನಕಟ್ಟೆ, ತನ್ನ 7ನೇ ವಯಸ್ಸಿನಲ್ಲಿ ನಾಟಕ ಕ್ಷೇತ್ರಕ್ಕೆ ಕಾಲಿಟ್ಟು ಪಾತ್ರಗಳನ್ನು ಅಭಿನಯಿಸುತ್ತ, ಪ್ರಸ್ತುತ ನಟ, ನಿರ್ದೇಶಕ ಮತ್ತು ರಚನೆಕಾರರಾಗಿ ಅದ್ಭುತ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರಿಗೆ ನಾಟಕ ಒಂದು ಹುಚು. ತನ್ನ ಎಡೆಬಿಡದ ಕೆಲಸದ ಮಧ್ಯೆಯಯೂ ರಂಕರ್ಮಿಯಾಗಿ ಇಂದಿಗೂ ನಾಟಕೋತ್ಸವಗಳನ್ನು ಮಾಡುತ್ತಾ, ಯುವ ನಾಟಕಕಾರರನ್ನು ಹುರಿದುಂಬಿಸುತ್ತಾ, ಶಿಬಿರಗಳನ್ನು ಮಾಡುತ್ತಾ ರಂಗಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಇಂಥವರನ್ನು ಅಕಾಡೆಮಿ ಗುರುತಿಸುವ ಮೂಲಕ ಪತ್ರಕರ್ತರೂ ಆಗಿರುವ ಚಂದ್ರಶೇಖರ್ ಅವರನ್ನು ಗೌರವಿಸಿದೆ . ಇದು ಪತ್ರಿಕಾ ಕ್ಷೇತ್ರಕ್ಕೆ ಒಂದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಮಂಜುನಾಥ್ ಮತ್ತು ಚಂದ್ರಶೇಖರ್ ಅವರರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿವಿಧ ತಾಲೂಕಿನ ಪತ್ರಿಕಾ ಸಂಘಟನೆಯವರು, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್,
ರೈತ ಮುಖಂಡ ಕೆ ಟಿ ಗಂಗಾಧರ್, ನ್ಯಾಯವಾದಿ ಕೆ ಪಿ ಶ್ರೀಪಾಲ್, ಕಾಂಗ್ರೆಸ್ ಮುಖಂಡ ಎಲ್. ಸತ್ಯನಾರಾಯಣರಾವ್ ಸಹಿತ ಹಲವರು ಇಬ್ಬರನ್ನೂ ಗೌರವಿಸಿದರು.
ಪ್ರಾಸ್ತಾವಿಕವಾಗಿ ಪತ್ರಕರ್ತ ಟೆಲೆಕ್ಸ್ ರವಿಕುಮಾರ್ ಮಾತನಾಡಿದರು. ಸಂಪಾದಕ ನಾಗರಾಜ ನೇರಿಗೆ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಉಪಾಧ್ಯಕ್ಷ ವೈದ್ಯನಾಥ ವಹಿಸಿದ್ದರು.
ಮಂಜುನಾಥ ಪತ್ರಿಕೋದ್ಯಮದಾಚೆಗೂ ವಿವಿಧ ಕ್ಷೇತ್ರಗಳಲ್ಲಿ ಹೋರಾಟ ಮಾಡಿದವರು. ಶಿವಮೊಗ್ಗದ ಪತ್ರಕರ್ತರು ರಾಜ್ಯದ ವಿವಿಧಡೆ ಕೆಲಸ ಮಾಡುತ್ತಿದ್ದರೆ ಅದಕ್ಕೆ ಮಂಜುನಾಥ್ ಕಾರಣ. ಇಲ್ಲಿಂದ ಅವರಲ್ಲಿ ತರಬೇತು ಪಡೆದು ಹೋದ ಪತ್ರಕರ್ತ ಸಂಖ್ಯೆ ಅತಿ ಹೆಚ್ಚು ಇದೆ. ಪತ್ರಿಕಾ ಭವನ ನಿರ್ಮಾಣದಲ್ಲಿ ಅವರ ಪಾತ್ರ ಅತಿ ಮಹತ್ವದ್ದು. ನೈತಿಕತೆಯ ಪತ್ರಿಕೋದ್ಯಮ ಮಾಡುತ್ತಾ, ತಮ್ಮ ಛಾಪನ್ನು ಪತ್ರಿಕಾ ರಂಗದಲ್ಲಿ ಮೂಡಿಸಿದ್ದಾರೆ. ಪತ್ರಿಕಾ ರಂಗದ ಎಲ್ಲಾ ಕೆಲಸಕ್ಕೂ ಸದಾ ಪ್ರೋತ್ಸಾಹ ಕೊಡುವ ಗುಣ ಅವರದ್ದು.
– ಗೋಪಾಲ ಯಡಗೆರೆ, ಕನ್ನಡಪ್ರಭ ಹಿರಿಯ ವರದಿಗಾರ
ಮಂಜುನಾಥ್ ಎಲ್ಲರ ಭಾವನೆಗಳಿಗೂ ಬೆಲೆ ಕೊಡುವವರು. ಇಂದಿನ ಯುವ ಪತ್ರಕರ್ತರಿಗೂ ಹಿರಿಯರಷ್ಟೇ ಆತ್ಮೀಯರಾಗಿದ್ದಾರೆ. ಸವಾಲಿನ ಪತ್ರಿಕಾ ಕೆಲಸವನ್ನು ತಮ್ಮ ಶ್ರಮ ಹಾಗೂ ದಿಟ್ಟ ಆಲೋಚನೆಗಳ ಮೂಲಕ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಅವರ ಇಂತಹ ಮಹತ್ತರ ಕೆಲಸ ಗಮನಿಸಿ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.
– ಜೇಸುದಾಸ್ , ವಾಹಿನಿ ಪತ್ರಕರ್ತ
40 ವರ್ಷಗಳ ನನ್ನ ಪತ್ರಿಕೋದ್ಯಮದ ಜೀವನದಲ್ಲಿ ಹಲವಾರು ಜನ ಕೈಜೋಡಿಸಿದ್ದಾರೆ ಅನೇಕರು ಅಡಿಪಾಯದ ಕಲ್ಲುಗಳನ್ನೇ ಜೋಡಿಸಿದ್ದಾರೆ ಅದನ್ನು ನಾನು ಎಂದಿಗೂ ಮರೆಯಲಾರೆ ನನ್ನದು ಹೊರಗಿದ್ದು ಸಂಘರ್ಷ ಮಾಡುವುದಲ್ಲ ಒಳಗಿದ್ದೆ ಸಂಘರ್ಷ ಮಾಡಿ ಇರುವ ಅವ್ಯವಸ್ಥೆಯನ್ನು ಸರಿಪಡಿಸುವುದು ನನ್ನ ಹುಟ್ಟುಗುಣ ಇದು ಕೆಲವರ ಮನಸ್ಸಿಗೆ ಗಾಸಿಯಾಗಬಹುದು ಆದರೆ ಸತ್ಯದ ಅರಿವಾದಾಗ ಅವರೇ ಮತ್ತೆ ನನ್ನ ಬಳಿ ಬಂದು ಮಾತನಾಡಿದ್ದಾರೆ ಹೀಗೆ ನನ್ನ ಜೀವನ ಸಾಗಿ ಬಂದಿದೆ.
50 ವರ್ಷಗಳಾಗುವ ಸಂದರ್ಭದಲ್ಲಿ ಎಲ್ಲಾ ಅನುಭವಗಳ ಹೋರಾಟದ ಹಾಗೂ ಪತ್ರಿಕೋದ್ಯಮ ನಡೆದು ಬಂದ ಘಟನೆಗಳ ಕುರಿತು ಲೇಖನಗಳನ್ನ ಬರೆಯಬೇಕು ಅಂದುಕೊಂಡಿದ್ದೇನೆ ಒಂದೊಂದಾಗಿ ಅವೆಲ್ಲವನ್ನು ಪ್ರಕಟಿಸುತ್ತೇನೆ ನನಗೆ ಬಂದ ಮೊಹೊರೆ ಹನುಮಂತ ರಾಯ ಪ್ರಶಸ್ತಿಯ ಮತ್ತವನ್ನ ಕ್ರಾಂತಿ ದೀಪ ಪತ್ರಿಕೆಯ ಹೆಸರಿನಲ್ಲಿ ಉತ್ತಮ ಪತ್ರಕರ್ತರಿಗೆ ಪ್ರಶಸ್ತಿ ಕೊಡುವುದಕ್ಕೆ ಮೀಸಲಿಡುತ್ತೇನೆ ಇದಕ್ಕೆ ನನ್ನ ಕುಟುಂಬದ ಸದಸ್ಯರು ಕೂಡ ಒಪ್ಪಿಗೆ ಸೂಚಿಸಿದ್ದಾರೆ.ಪ್ರಸ್ತುತ ದಿನಮಾನಗಳಲ್ಲಿ ಕೋಮು ಸೌಹಾರ್ದತೆ ಮತ್ತು ಸಾಮರಸ್ಯ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ವಿಶೇಷ ವರದಿಗಳನ್ನು ಬರೆಯುವ ಲೇಖನಗಳನ್ನ ಬರೆಯುವ ಉದ್ಯೋನ್ಮುಖ ಪತ್ರಕರ್ತರಿಗೆ ಪ್ರಶಸ್ತಿ ನೀಡಲು ಚಿಂತಿಸಿದ್ದೇನೆ.
ಕಳೆದ ಒಂದು ದಶಕದಿಂದ ಈಚೆಗೆ ಪೀತಪತ್ರಿಕೋದ್ಯಮ ಹೆಚ್ಚಾಗುತ್ತಿದೆ ಪತ್ರಕರ್ತರೆ ಅಲ್ಲದವರು ಸಂಘಟನೆಗಳನ್ನ ರಚಿಸಿಕೊಂಡು ನಮ್ಮದೇ ನೈಜ ಸಂಘಟನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಇದು ನಮ್ಮ ಸಂಘಟನೆಯ ದೌರ್ಬಲ್ಯವನ್ನ ತೋರಿಸುತ್ತೆ ನೈಜ ಪತ್ರಕರ್ತರಿಗೆ ಪ್ರಶಸ್ತಿಗಳನ್ನ ಕೊಡಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ ಅದಕ್ಕೆ ಆತ್ಮ ತೃಪ್ತಿಯು ಇದೆ.
-ಎನ್.ಮಂಜುನಾಥ್