ಶಿವಮೊಗ್ಗ,ಅ.23 : ಖಾಲಿ ಜಾಗದಲ್ಲಿ ಅಳವಡಿಸಿದ್ದ ಮೊಬೈಲ್ ಟವರ್ (Tower) ಕಳ್ಳತನವಾಗಿದೆ. ಈ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಟಿಪ್ಪು ನಗರದ ಖಾಲಿ ಜಾಗದಲ್ಲಿ ಖಾಸಗಿ ಸಂಸ್ಥೆಯೊಂದು 2008ರಲ್ಲಿ ಮೊಬೈಲ್ ಟವರ್ ಅಳವಡಿಸಿತ್ತು. ಅದೇ ಸಂಸ್ಥೆ ಟವರ್‌ನ ನಿರ್ವಹಣೆ ಮಾಡುತ್ತಿತ್ತು. ಕೋವಿಡ್ ಸಂದರ್ಭ ನಿರ್ವಹಣೆ ಸಾಧ್ಯವಾಗಿರಲಿಲ್ಲ.
ಆ ಬಳಿಕ ಸಂಸ್ಥೆಯವರು ಸ್ಥಳಕ್ಕೆ ಬಂದಾಗ ಮೊಬೈಲ್ ಟವರ್ ಮತ್ತು ಅದಕ್ಕೆ ಅಳವಡಿಸಿದ್ದ ಬಿಡಿ ಭಾಗಗಳೆ ನಾಪತ್ತೆಯಾಗಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಖಾಸಗಿ ಸಂಸ್ಥೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು. ಈಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟವರ್ ಮತ್ತು ಬಿಡಿ ಭಾಗಗಳ ಅಂದಾಜು ಮೌಲ್ಯ 46.30 ಲಕ್ಷ ರೂ. ಎಂದು ಉಲ್ಲೇಖಿಸಲಾಗಿದೆ.