ಶಿವಮೊಗ್ಗ: ನಗರದ ಹಿಂದು ಮಹಾಸಭಾ ಗಣೇಶನ ವಿಸರ್ಜನೆ ಮತ್ತು ಅದಕ್ಕೂ ಪೂರ್ವ ನಡೆದ ಮೆರವಣಿಗೆ ಶಾಂತಿಯುತ, ವಿಜೃಂಭಣೆಯಿಂದ ನಡೆದಿದೆ. ಅದೇ ರೀತಿ ಸೆ. 22 ರಂದು ನಡೆಯುವ ಈದ್ ಮಿಲಾದ್ ಮೆರವಣಿಗೆಯೂ ಸಡಗರ, ಸಂಭ್ರಮದಿಂದ ನಡೆಯಲಿ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಆಶಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಯುವಕ-ಯುವತಿಯರು ಪಾಲ್ಗೊಂಡು ಸಂಭ್ರಮಿಸಿದ್ದಾರೆ.
ಆತಂಕಗೊಂಡಿದ್ದವರಿಗೆ ನೆಮ್ಮದಿ ಸಿಕ್ಕಿದೆ. ಶಿವಮೊಗ್ಗದಲ್ಲಿ ಆತಂಕದ ವಾತಾವರಣದ ಸೃಷ್ಟಿಗೆ ಅವಕಾಶ ಕೊಡುವುದಿಲ್ಲ ಎನ್ನುವುದನ್ನು ಈ ಮೂಲಕ ಸಾರಲಾಗಿದೆ. ಎಂದರು.
ಈದ್ ಮಿಲಾದ್ ಮೆರವಣಿಗೆ ಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ, ಶಾಂತಿಯುತವಾಗಿ ಮೆರವಣಿಗೆ ನಡೆಯುಲಿದೆ ಎಂಬ ಭಾವನೆ ಇದೆ. ಪ್ಯಾಲೆಸ್ತೀನ್ ವಿಚಾರ ಈಗ ಚರ್ಚೆಗೊಳಗಾಗಿದೆ. ಈಗಲೇ ಆ ಸಮಾಜದವರು ಕಟ್ಟೆಚ್ಚರ ವಹಿಸಬೇಕು ಎಂದರು.
ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಎಲ್ಲವೂ ಒಟ್ಟುಗೂಡಿ ವಿಜೃಂಭಣೆಯಿಂದ ಗಣೇಶೋತ್ಸವ ಮುಗಿದಿದೆ. ಬೆಳಿಗ್ಗೆ 4.16 ಕ್ಕೆ ವಿಸರ್ಜನೆ ಮುಗಿದಿದೆ. ಎಲ್ಲರಿಗೂ ಅಭಿನಂದನೆಗಳು ಎಂದರು.
ಪಕ್ಷಭೇದ ಮರೆತು ಈ ಯಶಸ್ಸಿಗೆ ಜನ ಕಾರಣೀಭೂತರಾಗಿದ್ದಾರೆ. ಒಟ್ಟಾಗಿ ಸೇರಿ ಶ್ರಮಿಸಿದರೆ ವೈಭವ ಹೇಗಿರುತ್ತೆ ಎಂಬುದಕ್ಕೆ ಶಿವಮೊಗ್ಗ ಸಾಕ್ಷಿಯಾಯ್ತು ಎಂದರು.