ಶಿವಮೊಗ್ಗ, ಜ.24 :ಅದೊಂದು ಪುಷ್ಪ ಲೋಕ ವಿವಿಧ ಬಗೆಯ ಪುಷ್ಪಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದು, ಈ ಕುಸುಮಗಳಿಂದಲೇ ರಾಷ್ಟ್ರಕವಿ ಕುವೆಂಪುರವರ ಕವಿಶೈಲ, ಜಿಲ್ಲೆಯ ಪುರಾಣ ಪ್ರಸಿದ್ದ ರೇಣುಕಾಂಬೆ ದೇಗುಲ, ಗರಿಬಿಚ್ಚಿದ ನವಿಲು ಹೀಗೆ ನಾನಾ ಕಲಾಕೃತಿಗಳು ಎಲ್ಲರನ್ನು ಆಕರ್ಷಿಸುತ್ತಿದೆ.
ಹೌದು, ನಗರದ ಅಲ್ಲಮಪ್ರಭು ಮೈದಾನದಲ್ಲಿ ತೋಟಗಾರಿಕಾ ಇಲಾಖೆ ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಹಾಗೂ ಮಲೆನಾಡ ಕರಕುಶಲ ಉತ್ಸವದಲ್ಲಿ ಕಂಡು ಬರುತ್ತಿರುವ ದೃಶ್ಯಾವಳಿಗಳು ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಆರಂಭದಲ್ಲಿಯೇ ಮೇಳದ ಸ್ವಾಗತ ಕಮಾನು ಸ್ವಾಗತಿಸಿದರೆ, ನಂತರದಲ್ಲಿ ಎದುರಾಗುವುದೇ ಶಿವಮೊಗ್ಗವನ್ನು ಬಿಂಬಿಸುವ ಆಂಗ್ಲ ಭಾಷೆಯ ಎಸ್‌ಎಂಜಿ ಸೇವಂತಿಗೆ ಹೂವಿನಲ್ಲಿ ಕಣ್ಣುಕುಕ್ಕುತ್ತದೆ.
ಇದರ ಪಕ್ಕದಲ್ಲಿ ಕೆಂಪು ಗುಲಾಬಿಯ ಹೃದಯಾಕೃತಿ, ಎಲ್ಲರನ್ನು ಸೆಳೆಯುತ್ತಿದ್ದು, ಇದರೊಳಗೆ ನಿಂತು ಫೋಟೋ ಕ್ಲಿಕ್ಕಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇದರ ಬದಿಯಲ್ಲಿ ಸಾಗಿದರೆ ವಿವಿಧ ಮಳಿಗೆಗಳು ಇದರ ಎದುರು ಸಾಲಿನಲ್ಲಿ ವಿವಿಧ ಬಗೆಯ ಸೊಪ್ಪು , ತರಕಾರಿಗಳು, ಕಾಯಿ ಪಲ್ಯಗಳು ಅನಾವರಣಗೊಂಡಿದ್ದು, ನೋಡುಗರಿಗೆ ಇಷ್ಟೊಂದು ಬಗೆಯ ತರಕಾರಿಗಳು ಸೊಪ್ಪು, ಇವೆಯೇ ಎಂದು ಅಚ್ಚರಿಯನ್ನು ಉಂಟು ಮಾಡುತ್ತವೆ. ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕೂ ಕೂಡ ಮೇಳದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮಲೆನಾಡ ಕರಕುಶಲ ವಸ್ತುಗಳು ಇದೇ ಆವರಣದಲ್ಲಿ ನರೇಗಾ ಯೋಜನೆ ಕುರಿತು ಮಾಹಿತಿ,ಹಾಗೂ ರೈತರು ಬೆಳೆದ ವಿಶೇಷವಾದ ಹೂವು, ಹಣ್ಣು, ತರಕಾರಿ, ತೋಟಗಾರಿಕೆ ಬೆಳೆಗಳ ಪ್ರದರ್ಶವನ್ನು ಮಾಡಲಾಗಿದೆ.ಇದರ ಜೊತೆಗೆ ಸಸ್ಯದ ವಿವಿಧ ಭಾಗಗಳು, ಧಾನ್ಯಗಳನ್ನು ಕೂಡ ಪ್ರದರ್ಶಿಸಲಾಗಿದೆ. ಈ ಬಾರಿ ಗುಲಾಬಿ, ಸೇವಂತಿಗೆ, ಆರ್ಕಿಡ್, ಕಾರ್ನೇಷನ್, ಲಿಲ್ಲೀಸ್, ಪೊಲೀಯೇಜ್ ಮುಂತಾದ ಬಗೆಗಳ 4.80 ಲಕ್ಷ ಹೂವುಗಳನ್ನು ಬಳಸಿ ಕುಪ್ಪಳಿ ಕವಿಶೈಲದ 28 ಅಡಿ ಎತ್ತರದ ಕಲಾಕೃತಿ ಹಾಗೂ ಚಂದ್ರಗುತ್ತಿ ರೇಣುಕಾಂಬೆ ದೇವಾಲಯದ 14 ಅಡಿ ಎತ್ತರದ ಕಲಾಕೃತಿ ನಿರ್ಮಿಸಲಾಗಿದೆ.
ಹೂವಿನಿಂದ ನಿರ್ಮಾಣವಾದ ನವಿಲಿನ ಮಾದರಿ, ಐ ಲವ್ ಶಿವಮೊಗ್ಗ ಎಂಬ ಸೆಲ್ಫಿ ಪಾಯಿಂಟ್, 45 ಕ್ಕೂ ಹೆಚ್ಚು ಬೊನ್ಸಾಯ್ ಗಿಡಗಳ ಪ್ರದರ್ಶನ ಕೂಡ ನಡೆದಿದೆ. ಮಲೆನಾಡು ಬ್ರಾಂಡ್ ಮೂಲಕ ಹಸೆ ಚಿತ್ತಾರ, ಗೃಹ ಅಲಂಕಾರ, ಟೆರಾಕೋಟಾ ವಸ್ತು ಮುಂತಾದವುಗಳನ್ನು ಮಾರಾಟ ಮಳಿಗೆಗಳು ಮೇಳದಲ್ಲಿ ಇವೆ.
ರೈತರು ಬೆಳೆದ ಉತ್ಪನ್ನಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಜತೆಗೆ ಖಾಸಗಿ ಕಂಪನಿಗಳು ಪ್ರಚಾರಕ್ಕಾಗಿ ತಮ್ಮ ಉತ್ಪನ್ನಗಳನ್ನು ಇರಿಸಿದ್ದಾರೆ. ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ ಇಲಾಖೆಗಳು ಮಳಿಗೆಗಳನ್ನು ತೆರೆದು ಜನರಿಗೆ ಸಮಗ್ರ ಮಾಹಿತಿ ನೀಡುತ್ತಿದೆ. ಮೇಳಕ್ಕೆ ಬರುವಂತಹವರಿಗೆ ಆಹಾರ ಮಳಿಗೆಗಳನ್ನು ಕೂಡ ತೆರೆಯಲಾಗಿದೆ. ಒಟ್ಟಾರೆ ಈ ಬಾರಿಯ ಫಲಪುಷ್ಪ ಪ್ರದರ್ಶನ ಹಿಂದೆಂದಿಗಿಂತಲೂ ಭಿನ್ನವಾಗಿದೆ ಎಂಬ ಅಭಿಪ್ರಾಯ ಮೇಳದ ಸ್ಥಳದಲ್ಲಿ ವ್ಯಕ್ತವಾಯಿತು.