ಶಿವಮೊಗ್ಗಜ.25: ಇಲ್ಲಿನ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗವು, ನವಜಾತ ಶಿಶು ಮತ್ತು ಮಕ್ಕಳ ವಿಭಾಗದ ಜೊತೆಗೂಡಿ ಯಶಸ್ವಿಯಾಗಿ ಅತಿ ಕ್ಲಿಷ್ಠಕರವಾದ, ಜೀವಕ್ಕೆ ಅಪಾಯ ತಂದೊಡ್ಡಿದ ಹೆರಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿಭಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪ್ರಸೂತಿ ಮತ್ತು ಸ್ರ್ತೀ ರೋಗ ತಜ್ಞ ಡಾ|| ರಾಘವೇಂದ್ರ ಭಟ್, ಸುಮಾರು ೩೭ ವರ್ಷದ ಗರ್ಭಿಣಿ ೭ನೇ ತಿಂಗಳಿನಲ್ಲಿ ಒಂದು ಸಂದಿಗ್ಧ ಸಮಸ್ಯೆಯೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಗಳನ್ನು ಮಾಡಿದಾಗ ಇವರಿಗೆ ಗರ್ಭಾವಸ್ಥೆಯಲ್ಲಿ ಗರ್ಭ ಚೀಲದ ಒಳಗೆ ಇರಬೇಕಾದ ಪ್ಲಾಸೆಂಟಾ ಗರ್ಭಕೋಶವನ್ನು ಛೇಧಿಸಿಕೊಂಡು ಹೊರಗೆ ಹೋಗಿದ್ದರಿಂದ ತಾಯಿಯ ಜೀವಕ್ಕೆ ಅಪಾಯ ತಂದೊಡ್ಡಿತ್ತು. ಇದು ಎಂತಹ ಗಂಭೀರ ಸಮಸ್ಯೆ ಆಗಿತ್ತು ಎಂದರು.
ಹಗಲು- ರಾತ್ರಿ ಶ್ರಮಿಸಿ ಯಶಸ್ವಿಯಾಗಿ ಈ ಚಿಕಿತ್ಸೆಯನ್ನು ನಿರ್ವಹಿಸಲಾಗಿದೆ. ಈ ತಂಡದಲ್ಲಿ ಪ್ರಸೂತಿ ತಜ್ಞರು, ಮೂತ್ರಕೋಶ ತಜ್ಞರು, ಇಂಟರ್‌ವೆನ್ನನಲ್ ರೇಡಿಯಾಲಜಿಸ್ಟ್, ವ್ಯಾಕ್ಯೂಲರ್ ಸರ್ಜನ್, ನವಜಾತ ಶಿಶು ತಜ್ಞರು, ಇಂಟೆನ್ಸಿಸ್ಟ್ ಹಾಗೂ ಹಿರಿಯ ಅರವಳಿಕೆ ತಜ್ಞರುಗಳು ಭಾಗವಹಿಸಿದ್ದರು ಎಂದರು.
ಈ ಗರ್ಭಿಣಿಗೆ ರಕ್ತದ ಯುನಿಟ್‌ಗಳು, ಪ್ಲೇಟೇಟ್ ಯುನಿಟ್‌ಗಳು, ಎಫ್ ಎಫ್ ಪಿ ಮತ್ತು ಕ್ರಯೋಪ್ರೇಸಿಪಿಟೇಟ್ ಯುನಿಟ್‌ಗಳು ಒಟ್ಟು ೮೦ ಯುನಿಟ್‌ಗಳನ್ನು ಉಪಯೋಗಿಸಲ್ಪಟ್ಟವು. ಇಲ್ಲಿ ಗರ್ಭಿಣಿಗೆ ಅರವಳಿಕೆ ಚಿಕಿತ್ಸೆಕೊಟ್ಟ ನಂತರ ರೆಡಿಯಾಲಜಿಸ್ಟ್ ಸಹಾಯದಿಂದ ಗರ್ಭಕೋಶಕ್ಕೆ ರಕ್ತ ಪೂರೈಸುವ ೨ ಮುಖ್ಯ ಧಮನಿಗಳನ್ನು ಬ್ಲಾಕ್ ಮಾಡಿ ಕೂಡಲೇ ಮಗುವನ್ನು ಹೊರತೆಗೆದು, ಗರ್ಭಿಣಿಯ ಜೀವ ಉಳಿಸುವ ನಿಟ್ಟಿನಲ್ಲಿ ಗರ್ಭಕೋಶವನ್ನು ತೆಗೆಯಲಾಯಿತು. ಇದರ ನಂತರ ಬ್ಲಾಕ್ ಮಾಡಿದ ಧಮನಿಗಳನ್ನು ಕಟ್ಟಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಲಾಯಿತು ಎಂದು ವಿವರಿಸಿದರು.
ಶಸ್ತ್ರಚಿಕಿತ್ಸೆಯ ನಂತರ ತಾಯಿಯನ್ನು ಐಸಿಯುನಲ್ಲಿ ಇಂಟೆನ್ಸಿಸ್ಟ್ ಸುಪರ್ದಿನಲ್ಲಿ ಆರೈಕೆ ಮಾಡಲಾಯಿತು. ಮಗುವನ್ನು ನವಜಾತ ಶಿಶು ತಜ್ಞರಿಂದ ಎನ್ ಐಸಿಯುನಲ್ಲಿ ಆರೈಕೆ ಮಾಡಲಾಯಿತು. ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು ಎಲ್ಲಾ ವಿಭಾಗಗಳನ್ನು ಒಳಗೊಂಡಿರುವುದರಿಂದ ಸುಸಜ್ಜಿತವಾದ ತೀರ್ವನಿಗಾ ಘಟಕ, ರಕ್ತನಿಧಿ ಕೇಂದ್ರ ಸೇರಿದಂತೆ ನುರಿತ ತಜ್ಞ ವೈದ್ಯರುಗಳು ಇರುವುದರಿಂದ ಅತ್ಯಂತ ಕ್ಲಿಷ್ಟಕರ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಯಿತೆಂದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮ್ಯಾನೇಜರ್ ಶೈಲೇಶ್ ಹಾಜರಿದ್ದರು.