Advertisement
ಜಿಲ್ಲೆರಾಜ್ಯರಾಷ್ಟ್ರೀಯರಾಜಕೀಯಮಹಿಳೆಕೃಷಿಅಂಕಣಸಿನಿಮಾಸಾಹಿತ್ಯ್ಶಿಕ್ಷಣಕ್ರೀಡೆಕ್ರೈಂ

ಮಾರಿಕಾಂಬೆಗೆ ಚಿನ್ನದ ಮುಖವಾಡ, ರಜತ ದ್ವಾರ ಅರ್ಪಣೆ

ಶಿವಮೊಗ್ಗ, ಜು.03: ದೇವರ ಸನ್ನಿಧಿಗೆ ಭಕ್ತರು ಬಂದಾಗ ಮಗುವಿನಂತೆ ಇರಬೇಕು. ಅಹಂಕಾರ, ಸಂಪತ್ತು ಎಷ್ಟೇ ಇದ್ದರೂ ಎಲ್ಲವನ್ನೂ ದೇವಸ್ಥಾನದ ಹೊರಗೆ ಇಟ್ಟು ಬರಬೇಕು. ಆಗ ಮಾತ್ರ ದೇವರ ಅನುಗ್ರಹ  ಸಿಗಲು ಸಾಧ್ಯ ಎಂದು ಹೊರನಾಡು ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಶುಕ್ರವಾರ ಶಿವಮೊಗ್ಗದ ಮಾರಿಕಾಂಬಾ ದೇವಿಗೆ ‘ಸುವರ್ಣ ಮುಖ ಕವಚ ಮತ್ತು ದ್ವಾರ ಅರ್ಪಣೆ ಸಮಾರಂಭ’ದಲ್ಲಿ ಮಾತನಾಡಿದರು.ಪ್ರತಿ ದೇವರ ಕೈ ನಲ್ಲೂ ಭರವಸೆಯ ಅರ್ಥವಿದೆ. ನಮ್ಮ ಕರ್ತವ್ಯ ಮತ್ತು ನಡತೆ ಮೇಲೆ ದೇವರು ನಮಗೆ ಏನ್ನು ಅನುಗ್ರಹ ಮಾಡಬೇಕೋ ಅದನ್ನು ಮಾಡುತ್ತಾನೆ. ನಾವು ಏನ್ನೂ ಬೇಡಬಾರದು. ನನ್ನ  ಭಕ್ತಿಗೆ ದಯಪಾಲಿಸಬೇಕಾದ್ದನ್ನು ಕೊಡು ಎಂದಷ್ಟೇ ಕೇಳಬೇಕು. ನಮ್ಮಲ್ಲಿನ ಕೆಟ್ಟ ಚಿಂತನೆ, ಕೆಟ್ಟ ಕೆಲಸವನ್ನು ಬಿಡಬೇಕು. ಇಲ್ಲವಾದರೆ ಆ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ದೇವರು ಶಿಕ್ಷೆ ಕೊಟ್ಟೇ ಕೊಡುತ್ತಾನೆ ಎಂದು ಹೇಳಿದರು.

ದೇವರೆದುರು ಬಂದಾಗ ಖಾಲಿಯಾಗಿ ಬರಬೇಕು. ಶ್ರದ್ಧಾಭಕ್ತಿ ಸಮರ್ಪಣೆಯಿಂದ ದೇವರು ನಮ್ಮನ್ನು ತುಂಬಿಸುತ್ತಾನೆ. ದೇವರಿಗೆ ಮುಖ ಕವಚ ಅರ್ಪಿಸಿದರೆ ನಮಗೆ ಶ್ರೀರಕ್ಷೆ ಅದಾಗುತ್ತದೆ. ಇಡೀ ಶಿವಮೊಗ್ಗದ ಮೇಲೆ ಮಾರಿಕಾಂಬೆಯ ಶ್ರೀರಕ್ಷೆ ಇರುತ್ತದೆ. ದೇವರ ಚಿನ್ನದ ಕಿರೀಟ ಮತ್ತು ರಜತ ದ್ವಾರಕ್ಕೆ ಬೆಲೆ ಕಟ್ಟಲಾಗದು. ಅದು ದಿವ್ಯವೂ, ಭವ್ಯವೂ ಆದುದು. ಈ ಹಿನ್ನೆಲೆಯಲ್ಲಿ ಹಲವು ಭಕ್ತರು ತಾವು ನೀಡಿದ ದೇಣಿಗೆಯನ್ನು ಸಹ ಪ್ರಚುರಪಡಿಸಬಾರದೆಂದು ಹೇಳಿದ್ದಾರೆ. ಅವರೆಲ್ಲರೂ ದೇಶವಿದೇಶ ಎಲ್ಲೇ ಇದ್ದರೂ ಸದಾ ಶ್ರೀ ಮಾರಿಕಾಂಬೆಯ ಭಕ್ತರಾಗಿರುತ್ತಾರೆ ಎಂಧರು.

ಶಾಸಕ ಎಸ್ ಎನ್. ಚನ್ನಬಸಪ್ಪ ಮಾತನಾಡಿ, ದೇವಸ್ಥಾನ ಮೊದಲು ಬರಿ ಗದ್ದುಗೆಯಲ್ಲಿತ್ತು. ನಂತರ ಅದರ ಅಭಿವೃದ್ಧಿಯಾಗಿದೆ. ಭಕ್ತರು ಭೇದ ಭಾವ ತೋರದೆ ಎಲ್ಲಾ ರೀತಿಯ ನೆರವನ್ನು ನೀಡುತ್ತಿದ್ದಾರೆ. ದೇವಸ್ಥಾನ ಸಮಿತಿಯವರು ಸಹ ಎಲ್ಲ ಸೌಕರ್ಯಗಳನ್ನು ನೀಡುತ್ತಿದ್ದಾರೆ. ಸ್ವರ್ಣ ಕವಚ ಸಮರ್ಪಣೆ ಸದಾ ನೆನಪಿನಲ್ಲಿಡುವ ದಿನ ಎಂದರು.
ಮಾಜಿ ಶಾಸಕ ಕೆ ಬಿ ಪ್ರಸನ್ನಕುಮಾರ್ ಮಾತನಾಡಿ,  ಈಗ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸಮಿತಿ ಸದಾ ನಡೆಸುತ್ತಿದೆ. ಅದೇ ರೀತಿ ಭಕ್ತರಿಗೂ ಸಹ ವಿವಿಧ ರೀತಿಯ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಇದರಿಂದ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ದೇವಸ್ಥಾನ ಉತ್ತಮ ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಿದೆ. ಮಾರಿಕಾಂಬೆಯು ಶಿವಮೊಗ್ಗದ ಜನರಿಗೆ ಹೆಚ್ಚಿನ ಶಕ್ತಿಯನ್ನು ಕೊಡುತ್ತಿದ್ದಾಳೆ ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಮಾತನಾಡಿ, ಮಾರಿಕಾಂಬೆಯು ಶಾಂತಿ, ನೆಮ್ಮದಿಯನ್ನು ಇಡೀ ಜಿಲ್ಲೆಗೆ ನೀಡುತ್ತಿದೆ. ತಾಯಿಯ ಮಹತ್ವ ಶಿವಮೊಗ್ಗದವರಿಗೆ ಗೊತ್ತು. ವಿದೇಶದಲ್ಲಿರುವವರು ಸಹ ಈ ದೇವರಿಗೆ ಸದಾ ನಡೆದುಕೊಳ್ಳುತ್ತಿದ್ದಾರೆ. ತಾಯಿ ಆಶೀರ್ವಾದದಿಂದ ನಗರ ಮತ್ತು ಜಿಲ್ಲೆ ಸದಾ ನೆಮ್ಮದಿಯಿಂದ  ನೆಲೆಸಲಿ ಎಂದು  ಹೇಳಿದರು.
ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಸ್ ಕೆ ಮರಿಯಪ್ಪ ಮಾತನಾಡಿ, ಯಾರಲ್ಲಿಯೂ ಸಹ ದೇವಿಯ ಮುಖವಾಡ ಮತ್ತು ರಜತ ಕವಚಕ್ಕೆ ನೆರವನ್ನು ಸಮಿತಿಯವರು ಕೇಳಿಲ್ಲ. ಭಕ್ತರೇ ಸ್ವತಃ ಮುಂದಾಗಿ ಬಂದು ನೆರವು ನೀಡಿದ್ದಾರೆ. ಇದರಲ್ಲಿ ಎಲ್ಲ ಜಾತಿ, ಜನಾಂಗದವರು ಇದರಲ್ಲಿದ್ದಾರೆ. ಅವರು ಸದಾ ಕಾಲ ದೇವರಿಗೆ ನಡೆದುಕೊಳ್ಳುತ್ತಿದ್ದಾರೆ. ಬಂದು ಪೂಜೆ ಮಾಡಿಸಿ ಅನುಗ್ರಹ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಎನ್ ಮಂಜುನಾಥ್, ದೇವರ ಮುಖವಾಡ ಕವಚವನ್ನು ಸಿದ್ದಾಪುರದ ಪ್ರಶಾಂತ ಶೇಟ್ ಮತ್ತು ರಜತ ಕವಚವನ್ನು ಕುಮಟಾದ ಅಜಿತ್ ಶೇಟ್ ತಯಾರು ಮಾಡಿದ್ದಾರೆ. ಮುಖವಾಡವನ್ನು ದೇವಸ್ಥಾನದಲ್ಲಿಯೇ ಸುಮನರು ಒಂದುವರೆ ತಿಂಗಳ ಕಾಲ ಇದ್ದು  ಪ್ರಶಾಂತ್ ರಚಿಸಿಕೊಟ್ಟಿದ್ದಾರೆ. ಬಹಳ ಚಂದವಾಗಿ, ದೇವರಿಗೆ ಒಪ್ಪುವಂತಹ ಮುಖವಾಡ ಇದಾಗಿದು, ಇದು ಭಕ್ತರನ್ನು ಇನ್ನಷ್ಟು ಆಕರ್ಷಿಸಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭೀಮೇಶ್ವರ ಜೋಶಿಯವರು ಮುಖಕವಚ ಮತ್ತು ರಜತ ದ್ವಾರ ನಿರ್ಮಾಣ ಮಾಡಿದ ಪ್ರಶಾಂತ್ ಮತ್ತು ಅಜಿತ್ ದಂಪತಿಗಳನ್ನು ಸನ್ಮಾನಿಸಿದರು.
ವೇದಿಕೆಯಲ್ಲಿ  ಸಮಿತಿಯ ಪದಾಧಿಕಾರಿಗಳಾದ  ಎನ್. ಉಮಾಪತಿ ಎಸ್. ಸಿ ಲೋಕೇಶ್,  ಎ ಎಸ್ ಸುನಿಲ್, ಚಂದ್ರಶೇಖರ್,  ಜಯಲಕ್ಷ್ಮೀ ಈಶ್ವರಪ್ಪ,  ಮೊದಲಾದವರು ಹಾಜರಿದ್ದರು.

 ಶಿವಮೊಗ್ಗ ಸಂಸ್ಕೃತಿ, ಪರಂಪರೆ, ದೈವ ಮತ್ತು ಸಮಾಜಮುಖಿ ಕೆಲಸಗಳಿಗೆ ಹೆಸರಾಗಿದೆ. ಇಲ್ಲಿ ದಾನಿಗಳ ಸಂಖ್ಯೆಯೂ ಸಾಕಷ್ಟಿದೆ. ದೇವರ ಸ್ವರ್ಣ ಮುಖ ಕವಚಕ್ಕೆ ಸಾಕಷ್ಟು ದಾನಿಗಳು ನೆರವು ನೀಡಿದ್ದಾರೆ. ಭಕ್ತರು ಸ್ವಇಚ್ಛೆಯಿಂದ ಈ ರೀತಿಯ ನೆರವಿನ ಹಸ್ತವನ್ನು ಚಾಚಿದ್ದಾರೆ. ಭಕ್ತರು ದೇವರನ್ನು ನಂಬೇಕೇ ವಿನಾ ತಪ್ಪಾಗಿ ನಡೆಯಬಾರದು. ಕೆಟ್ಟ ವರ್ತನೆ, ಕೆಟ್ಟ ಸಂಸ್ಕೃತಿಯನ್ನು ಬಿಟ್ಟರೆ ಖಚಿತವಾಗಿಯೂ ದೇವರು ನಮ್ಮನ್ನು ಅನುಗ್ರಹಿಸುತ್ತಾನೆ.
- ಭೀಮೇಶರ ಜೋಶಿ

Author
Kranti Deepa
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST