ಶಿವಮೊಗ್ಗ : ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಬೀಡಿಗಾಗಿ ಪ್ರತಿಭಟನೆ ನಡೆಸಿದ್ದಾರೆ. ಜೈಲಿನ 778 ಕೈದಿಗಳು ಇಂದು ಬೆಳಗ್ಗಿನ ಉಪಹಾರವನ್ನು ಸೇವಿಸಿದೇ ಪ್ರತಿಭಟನೆಯನ್ನ ನಡೆಸಿದ್ದಾರೆ.
ಕಾರಾಗೃಹ ಇಲಾಖೆಯ ಬಿಗಿ ಕ್ರಮದಿಂದ ಜೈಲಿನಲ್ಲಿ ಬಿಡಿಯು ಸಹ ಸಿಗುತ್ತಿಲ್ಲ. ಆದರೆ ಬೀಡಿ ಸಿಗರೇಟಿನ ಚಟಕ್ಕೆ ಅಡಿಕ್ಟ್ ಆಗಿರುವ ಕೈದಿಗಳು ಅದರಿಂದ ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ.
ಇದೇ ಕಾರಣಕ್ಕೆ ಇಂದು ಒಗ್ಗಟ್ಟಿನ ಪ್ರತಿಭಟನೆ ನಡೆಸುತ್ತಿದ್ದಾರೆ. ಜೈಲಿನಲ್ಲಿ ಬೆಳಗಿನ ಉಪಾಹಾರವನ್ನು ತ್ಯಜಿಸಿರುವ ಕೈದಿಗಳು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳುತ್ತಿದ್ದಾರೆ.
ಅವರ ಮನವೊಲಿಸುವ ಸಲುವಾಗಿ ಕಾರಾಗೃಹ ಇಲಾಖೆಯ ಅಧಿಕಾರಿಗಳ ತಂಡ ಪ್ರಯತ್ನ ನಡೆಸುತ್ತಿದೆ. ಆದಾಗ್ಯು ಅಧಿಕಾರಿಗಳ ಮಾತಿಗೆ ಕೈದಿಗಳು ಸುಮ್ಮನಾಗುತ್ತಿಲ್ಲ. ಬೇಕೆಬೇಕು ಬೀಡಿಯಾದರೂ ಬೇಕು ಎಂದು ಪ್ರತಿಭಟನೆ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.
ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಇತ್ತೀಚೆಗೆಷ್ಟೆ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ನೇತೃತ್ವದ 100 ಕ್ಕೂ ಹೆಚ್ಚು ಪೊಲೀಸರ ತಂಡ ರೇಡ್ ನಡೆಸಿತ್ತು. ಈ ವೇಳೆ ಮ್ಯಾಚ್ ಬಾಕ್ಸ್ ಹಾಗೂ ಬೀಡಿಯ ಬಂಡಲ್ ಮತ್ತು ಚಾರ್ಜರ್ ವಯರ್ ಸಿಕ್ಕಿತ್ತು. ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿತ್ತು.
ಇದರ ಬೆನ್ನಲ್ಲೆ ಶಿವಮೊಗ್ಗ ಜೈಲಿಗೆ ದರ್ಶನ್ ಗ್ಯಾಂಗ್‌ನ ಇಬ್ಬರು ಆರೋಪಿಗಳು ಇನ್ ಆಗಿದ್ದರು. ಆನಂತರ ಜೈಲಿನಲ್ಲಿ ಇನ್ನಷ್ಟು ಬಂದೋಬಸ್ತ್ ಮಾಡಲಾಗಿತ್ತು. ಇವೆಲ್ಲದರ ಪರಿಣಾಮವಾಗಿ ಕೈದಿಗಳಿಗೆ ಬೀಡಿ ಸಿಗಂದತಾಗಿದೆ. ಇದರಿಂದ ಸಿಟ್ಟಿಗೆದ್ದಿರುವ ಕೈದಿಗಳು ಪ್ರತಿಭಟನೆಗೆ ಇಳಿದಿದ್ದಾರೆ.