7 ಬೈಕ್ ಕದ್ದ ಮೂವರು ಪೊಲೀಸ್ ಬಲೆಗೆ

Kranti Deepa

ಶಿವಮೊಗ್ಗ : ನ. 24 : ಬೆಲೆಬಾಳುವ ಸುಮಾರು ೭ ಬೈಕ್‌ಗಳನ್ನು ಜಿಲ್ಲೆಯ ವಿವಿಧೆಡೆ ಕದ್ದಿದ್ದ ಭದ್ರಾವತಿಯ ಮೂವರನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪುರಲೆಯಲ್ಲಿ ಬಂಧಿಸಿ ಅವುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂಧಿಗಳಾದ ಹೆಚ್ ಸಿ ವೆಂಕಟೇಶ್, ರಾಘವೇಂದ್ರ, ಪಿಸಿ ಕವನ್, ಕಾಶಿನಾಥ್, ಗಣೇಶ್, ಶ್ರೀಕಾಂತ್, ಮತ್ತು ಬಸವರಾಜ್ ದನುವಿನ ಮನಿ ರವರುಗಳು ಪುರ್ಲೆಯ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಹಿಂಭಾಗ ಬೈಪಾಸ್ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ, ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಎರಡು ಬೈಕ್ ಗಳನ್ನು ನಿಲ್ಲಿಸಿಕೊಂಡು ನಿಂತಿದ್ದರು. ಇವರನ್ನು ತಪಾಸಣೆಗೆ ಒಳಪಡಿಸಿದಾಗ ಕದ್ದ ಏಳು ಬೈಕುಗಳ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇವರಿಂದ 9,40,000 ರೂ. ಮೌಲ್ಯದ ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿತರೆಂದರೆ, ಮೆಕಾನಿಕ್ ಕೆಲಸ ಮಾಡುವ ಭದ್ರಾವತಿಯ ಸೀತಾರಾಮಪುರದ ಇಮ್ರಾನ್ ಅಲಿಯಾಸ್ ಇಮ್ಮು (26), ಮರದ ಕೆಲಸ ಮಾಡುವ ಮದನ್‌ಕುಮಾರ್ ಅಲಿಯಾಸ್ ಗುಂಡಾ, (18) ಮತ್ತು ಗಾರೆ ಕೆಲಸದ ಹರೀಶ ಎನ್ (18). ಹೊಳೆಹೊನ್ನೂರು ಪೊಲೀಸ್ ಠಾಣೆಯ 3, ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ 2, ತುಂಗಾನಗರ, ಜಯನಗರರ ತಲಾ 1 ಪ್ರಕರಣ ಸೇರಿದಂತೆ ಒಟ್ಟು 7 ದ್ವಿಚಕ್ರ ವಾಹನ ಪತ್ತೆಯಾಗಿದೆ.

ಇನ್ನೂ ಹೆಚ್ಚಿನ ಬೈಕ್ ಗಳನ್ನು ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಆರೋಪಿಗಳ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

Share This Article
";