ಬಿಹಾರ,ಮೇ.08 : ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ನಡೆಸಿದ ದಿನವೇ ಹುಟ್ಟಿದ ಮಕ್ಕಳಿಗೆ ಪೋಷಕರು ಸಿಂಧೂರ ಹಾಗೂ ಸಿಂಧೂರಿ ಎಂದು ನಾಮಕರಣ ಮಾಡುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.
ಬಿಹಾರದ ಮುಜಫರ್‌ಪುರದ 12 ಕ್ಕೂ ಹೆಚ್ಚು ದಂಪತಿ ಆಪರೇಷನ್ ಸಿಂಧೂರ ದಿನ ಜನಿಸಿದ ತಮ್ಮ ಮಕ್ಕಳಿಗೆ ಸಿಂಧೂರ್ ಹಾಗೂ ಸಿಂಧೂರಿ ಎಂದು ಹೆಸರಿಟ್ಟಿದ್ದಾರೆ.
ಮುಜಫರ್‌ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಆ ದಿನ ಜನಿಸಿದ ಸುಮಾರು 12 ಕ್ಕೂ ಹೆಚ್ಚು ಮಕ್ಕಳಿಗೆ ಕುಟುಂಬದವರು ಆಪರೇಷನ್ ಸಿಂಧೂರ್‌ನಿಂದ ಪ್ರೇರಣೆಗೊಂಡು ಗಂಡು ಮಕ್ಕಳಿಗೆ ಸಿಂಧೂರ್ ಎಂದು ಹೆಣ್ಣು ಮಕ್ಕಳಿಗೆ ಸಿಂಧೂರಿ ಎಂದು ನಾಮಕರಣ ಮಾಡಿದ್ದಾರೆ.
ಎರಡು ಖುಷಿಗಳು ಒಟ್ಟೊಟ್ಟಿಗೆ ಬಂದಿವೆ: ಒಂದೇ ದಿನ ಎರಡು ಸಂತೋಷಗಳು ಒಟ್ಟಿಗೆ ಮನೆಗೆ ಬಂದಿವೆ ಎಂದು ಕುಟುಂಬ ಸದಸ್ಯರು ಖುಷಿ ಹಂಚಿಕೊಂಡರು. ಒಂದೆಡೆ ಮನೆಗೆ ಪುಟ್ಟ ಲಕ್ಷ್ಮಿ ಬಂದರೆ, ಇನ್ನೊಂದೆಡೆ ಪಾಕಿಸ್ತಾನದ ಮೇಲೆ ಭಾರತದ ದಾಳಿಯ ಸುದ್ದಿ ಖುಷಿಯನ್ನು ಇಮ್ಮಡಿಗೊಳಿಸಿದೆ. ವಿಶೇಷ ದಿನದಂದು ಜನಿಸಿದ ಕಾರಣ ಮಕ್ಕಳನ್ನು ಭವಿಷ್ಯದಲ್ಲಿ ದೇಶಸೇವೆಗಾಗಿ ಸೇನೆಗೆ ಸೇರಿಸುವುದಾಗಿ ಪೋಷಕರು ಹೇಳಿದ್ದಾರೆ.