ಶಿಕಾರಿಪುರ , ಆ. 18 : ಇಂದಿನ ಯುವಶಕ್ತಿ ಕೃಷಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಪಾಲ್ಗೊಂಡು ಮುನ್ನುಗ್ಗುವುದರೊಂದಿಗೆ ಇದರಲ್ಲಿ ಯಶಸ್ಸು ಕಾಣಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದರು.ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ( ಟಿಎಪಿಸಿಎಂಎಸ್) 75ನೇ ವರ್ಷದ ವಜ್ರ ಮಹೋತ್ಸವ ಸಮಾರಂಭ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ತಮ್ಮ ಕುಟುಂಬಕ್ಕಾಗಿ ದುಡಿಯದೆ, ದೇಶದ ಜನರ ಹಸಿವು ನೀಗಿಸಲು ದುಡಿಯುತ್ತಿದ್ದಾರೆ.
ರೈತರು ಸುಖಮಯ ಜೀವನ ನಡೆಸಿದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರೆತಂತೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯಬೇಕು. ರೈತರ ಆರ್ಥಿಕ ಸಂಕಷ್ಟ ದೂರವಾಗಬೇಕು. ಮಧ್ಯವರ್ತಿಗಳ ಹಾವಳಿ ತಗ್ಗಿಸಬೇಕು. ರೈತರು ಬಲಿಷ್ಠರಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಹಿತಾಶಕ್ತಿ ರಕ್ಷಿಸಲು ಬದ್ಧವಾಗಿದೆ ಎಂದರು.
ಪರಸ್ಪರ ಸಹಕಾರದಿಂದ ಮಾತ್ರ ದೇಶದ ಎಲ್ಲರೂ ಸಮೃದ್ಧಿ ಪಡೆಯಲು ಸಾಧ್ಯವಾಗುತ್ತದೆ. ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಂಘ ವಜ್ರ ಮಹೋತ್ಸವ ಸಮಾರಂಭ ಆಚರಿಸಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ಸಂಘದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರಾದ ಕೇಂದ್ರ ಸಚಿವರಾದ ಅಮಿತ್ ಶಾ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ರೈತರು ರಾಸಾಯನಿಕ ಗೊಬ್ಬರಕ್ಕೆ ಅವಲಂಬಿತರಾಗದೆ, ಸಾವಯವ ಗೊಬ್ಬರವನ್ನು ಉಪಯೋಗಿಸುವ ಭೂಮಿಯ ಫಲವತ್ತಾತೆ ಕಾಪಾಡಬೇಕು. ಸಹಕಾರಿ ಕ್ಷೇತ್ರ ಬಹುದೊಡ್ಡ ಕ್ಷೇತ್ರವಾಗಿ ಹೊರಹೊಮ್ಮಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ವೀರಶೈವ ಸಹಕಾರಿ ಸಂಘದ ನಿರ್ದೇಶಕರಾಗುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ಪುರಸಭಾ ಸದಸ್ಯರಾಗಿ ಶಾಸಕರಾಗಿ ಹಾಗೂ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ತಾಲ್ಲೂಕಿನ ರೈತರಿಗೆ ಅಗತ್ಯವಾದ ನೀರಾವರಿ ಯೋಜನೆಯನ್ನು ಅನುಷ್ಠಾನ ಮಾಡಿದ್ದಾರೆ ರೈತರ ಪರ ಹಲವು ಯೋಜನೆಗಳನ್ನು ನೀಡಿದ್ದಾರೆ ಎಂದು ಪ್ರಶಂಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎ.ಬಿ. ಸುಧೀರ್ ಮಾರವಳ್ಳಿ, ನಮ್ಮ ಸಂಘವು 1949ರಲ್ಲಿ ಸ್ಥಾಪನೆಯಾಗಿದ್ದು ಮಾಜಿ ಸಭಾಪತಿ ಕೆ.ವಿ. ನರಸಪ್ಪ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ನಾನು 53ನೇ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಹಿರಿಯರ ಶ್ರಮದಿಂದ ಸಂಘ ಬೆಳೆದಿದೆ. ರೈತರಿಗೆ ಅಗತ್ಯ ಸಮಯಕ್ಕೆ ಗೊಬ್ಬರ ನೀಡುವ ಮೂಲಕ 75 ವರ್ಷಗಳಿಂದ ರೈತರ ಪರ ಕೆಲಸ ಮಾಡುತ್ತಿದೆ. ಎಂದರು.ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರನ್ನು ಹಾಗೂ ಪದಾಧಿಕಾರಿಗಳನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸನ್ಮಾನಿಸಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ರಾಜ್ಯ ಕೃಷಿಕ ಸಮಾಜ ನಿರ್ದೇಶಕ ನಗರದ ಮಹಾದೇವಪ್ಪ, ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್ ಬಾಳೆಕಾಯಿ, ಉಪಾಧ್ಯಕ್ಷೆ ರೂಪಾ ಮಂಜುನಾಥ್ ಪಾರಿವಾಳ, ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕರಾದ ಅಗಡಿ ಅಶೋಕ್ ಹೊಸಕೋಟೆ, ಹಿರಿಯೂರು ಹನುಮಂತಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಹಾಲಿ ನಿರ್ದೇಶಕರಾದ ಜಂಬೂರು ಶಿವಶಂಕರಪ್ಪ, ದೂದಿಹಳ್ಳಿ ಬಸವರಾಜ್, ಎಚ್.ಎಸ್. ರವೀಂದ್ರ, ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಹುಲ್ಮಾರ್ ಮಹೇಶ್, ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷೆ ಎಂ.ಎಸ್. ಪ್ರೇಮ ನಿರ್ದೇಶಕರಾದ ಬಿ.ಡಿ. ಭೂಕಾಂತ್, ಸುರೇಶ್ ಗೌಡ, ಶಶಿಧರ ಚುರ್ಚಿಗುಂಡಿ, ಎಸ್.ಎಸ್. ಮಾಜಿ ರಾಘವೇಂದ್ರ, ಬಿ. ಜಯನಾಯ್ಕ, ಬಸವಣ್ಣಪ್ಪ, ವೈ.ಅರ್. ಸುನಿತಾ, ಗಿರೀಶ್ ಹರಳೆಣ್ಣೆ, ಜಿ.ಬಿ. ವೀರಣ್ಣಗೌಡ, ಕಾರ್ಯದರ್ಶಿ ಗಣೇಶ್, ಸಿಬ್ಬಂದಿ ವೀರೇಶ್, ಶರತ್, ಕರಿಯಪ್ಪ, ತರುಣ್ ಉಪಸ್ಥಿತರಿದ್ದರು.