ಶಿವಮೊಗ್ಗ, ಸೆ.15 : ಸಣ್ಣ ಸಣ್ಣ ಸಮುದಾಯಗಳಿಗೆ ಸಂಘಟನೆಯೇ ಬಲ. ಆದ್ದರಿಂದ ಸಮಾಜದವರೆಲ್ಲ ಸೇರಿ ಸಂಘಟನೆಯನ್ನು ಬಲಗೊಳಿಸಬೇಕು. ನಾವೇಕೆ ಹಿಂದುಳಿದಿದ್ದೇವೆ ಎನ್ನುವುದನ್ನು ಅರಿತುಕೊಂಡು ನಾವು ಏಕೆ ಬದಲಾಗುತ್ತಿಲ್ಲ ಎಂಬ ಬಗ್ಗೆ ಆತ್ಮಅವಲೋಕನ ಮಾಡಿಕೊಳ್ಳಬೇಕೆಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ ಹೇಳಿದರು.
ಟ್ರಸ್ಟ್ ಪತ್ರಿಕಾ ಭವನದಲ್ಲಿ ಭಾನುವಾರ ಶ್ರೀ ಭಗೀರಥ ಸಹಕಾರ ಸಂಘದ ೩ನೆಯ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರನ್ನು ಗೌರವಿಸಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆ ಎಲ್ಲ ರಂಗದಲ್ಲೂ ಮುಂದುವರೆದಿದೆ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸದೃಢವಾಗಿದ್ದಾರೆ. ಇಲ್ಲಿ ನಮ್ಮದೇ ಸಮಾಜದ ಜಿಲ್ಲಾಮಟ್ಟದ ಸಹಕಾರ ಸಂಘ ಸ್ಥಾಪಿಸಿ ಸಮಾಜದ ಏಳಿಗೆಗೆ ಅದು ಕಂಕಣಬದ್ಧವಾಗಿದೆ.ಜಿಲ್ಲೆಯಲ್ಲಿನ ಪ್ರತಿಯೊಬ್ಬ ಸಮಾಜ ಬಾಂಧವರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಸಹಕಾರ ಸಂಘದ ಷೇರನ್ನು ಪಡೆದು ಸಮಾಜದ ಏಳಿಗೆಗೆ ಕೈಜೋಡಿಸಬೇಕು ಎಂದರು.ಸಂಘದಿಂದ ಸಾಲ ಪಡೆದು ವಿವಿಧ ಚಟುವಟಿಕೆಗಳಲ್ಲಿ ಅದನ್ನು ತೊಡಗಿಸಿ ಉನ್ನತಿಯಾಗಬೇಕು. ಮತ್ತು ಕಾಲಕಾಲಕ್ಕೆ ಮರು ಪಾವತಿ ಮಾಡಬೇಕು. ಆ ಮೂಲಕ ಸಮಾಜಕ್ಕೆ ನಮ್ಮ ಋಣ ತೀರಿಸಬೇಕು. ನಾವು ಸಮಾಜದಿಂದ ಏನನ್ನು ಪಡೆದಿದ್ದೇವೆಯೋ ಅದನ್ನು ಮರಳಿ ಸಮಾಜಕ್ಕೆ ಕೊಡಬೇಕು.ಇನ್ನೊಬ್ಬರು ಮೇಲೆ ಬರಲು ನಾವು ನೆರವಾಗಬೇಕು ಎಂದರು.ಸಮಾಜದಲ್ಲಿನ ಭಿನ್ನಮತವನ್ನು ತೊಡೆದುಹಾಕಿ ಒಳಿತಿಗಾಗಿ ಎಲ್ಲರೂ ಮುನ್ನಡೆಯಬೇಕು. ಸಂಘದ ಅಭಿವೃದ್ಧಿಗೆ ಯಾರು ಹೆಚ್ಚು ಕಾರಣಕರ್ತರಾಗುತ್ತಾರೋ ಅಂತಹವರು ಅಧಿಕಾರ ವಹಿಸಿಕೊಂಡು ಎಲ್ಲರನ್ನೂ ಒಳಗೊಂಡು, ಯುವಕರನ್ನು ಸೇರಿಸಿಕೊಂಡು ಸಮಾಜಕ್ಕಾಗಿ ದುಡಿಯಬೇಕು ಎಂದು ಕರೆ ನೀಡಿದರು.
ಸಂಘದ ನಿರ್ದೇಶಕ ಎಂ ಜಿ ಕೆ ಹನುಮಂತಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿರುವವರು ಶಿಕ್ಷಣವಂತರಾಗಬೇಕು. ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸದ ಸೌಲಭ್ಯ ಕಲ್ಪಿಸಬೇಕು. ಮಕ್ಕಳು ಪ್ರತಿಭಾನ್ವಿತರಾಗಬೇಕು. ಅವರ ಮೂಲಕ ಸಮಾಜ ಸೇವೆ ಮಾಡಬೇಕು. ಇಂದು ವಿದ್ಯೆ ಕಲಿತರಷ್ಟೇ ಮುನ್ನಡೆಯಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿಗಳನ್ನು ಮತ್ತು ಶೇ. ೯೦ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್. ಮಂಜುನಾಥ ಮಾತನಾಡಿ, ಸಮಾಜದ ಬಾಂಧವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಆ ಮೂಲಕ ಸಮಾಜದಲ್ಲಿನ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿ ಉದ್ಯೋಗ ಮತ್ತು ಆರ್ಥಿಕತೆಯಲ್ಲಿ ಉನ್ನತ್ತಿ ಪಡೆಯಲು ಸಾಧ್ಯ ಎಂದರಲ್ಲದೇ, ಜಿಲ್ಲೆಯಲ್ಲಿನ ಸಮಾಜ ಬಾಂಧವರು ಭಗೀರಥ ಸಹಕಾರ ಸಂಘದ ಷೇರುದಾರರಾಗುವ ಮೂಲಕ ಮಾದರಿ ಸಹಕಾರ ಸಂಘ ಎಂದು ಹೆಸರುಗಳಿಸಲು ಸಂಕಲ್ಪ ಮಾಡಬೇಕಾಗಿದೆ ಎಂದರು.
ಉಪಾಧ್ಯಕ್ಷ ವಸಂತ ಹೋಬಳಿದಾರ್, ನಿರ್ದೇಶಕರಾದ ಎಲ್. ಮಂಜುನಾಥ, ಎಚ್. ರವಿ,ಯು ಕೆ ವೆಂಕಟೇಶ್, ಯು ಕೆ ರಮೇಶ್, ಜಿ ಚಿದಾನಂದ, ಕೆ ಶ್ರೀನಿವಾಸ, ಎಸ್ ಪಿ ಸುಧಾಕರ,ವೈ ಬಿ ಲೋಕೇಶ್ ,ಎಲ್. ಚಂದ್ರಶೇಖರ್,ಅರ್ಚನಾ, ಕೆ. ಟಿ. ಶ್ರೀನಿವಾಸ ಮೊದಲಾದವರು ಉಪಸ್ಥಿತರಿದ್ದರು.