ಶಿವಮೊಗ್ಗ,ನ.26 :ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಎಲ್ಲಾ ಜನಾಂಗಕ್ಕೂ ಸೌಲಭ್ಯವನ್ನು ಕಲ್ಪಿಸುವ ಪಕ್ಷವಾಗಿದೆ. ಈ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಅಲ್ಲಮ್ಮ ಪ್ರಭು ಮೈದಾನದಲ್ಲಿ ಸಂವಿಧಾನ ಪೀಠಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಕೂಡ ಬೇರೆ ಪಕ್ಷದಲ್ಲಿ ಇದ್ದವನು ಈ ಪಕ್ಷದ ತತ್ವ ಸಿದ್ದಾಂತವನ್ನು ನಂಬಿ ಬಂದೆ ಇದೀಗ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇನೆ ಎಂದರು.
ಜೆಡಿಎಸ್ ಕೂಡ ದೊಡ್ದ ಪಕ್ಷ. ರಾಷ್ಟ್ರ ಮಟ್ಟದಲ್ಲಿ ಜೆಡಿಎಸ್ ಗುರುತಿಸಿಕೊಂಡಿದೆ. ಬೇರೆ ಪಕ್ಷದಿಂದ ಯಾರೇ ಕಾಂಗ್ರೆಸ್ ಸೇರ್ಪಡೆಗೊಂಡರೂ ಒಳ್ಳೆಯದೆ. ಆದರೆ, ಇಲ್ಲಿ ಜೆಡಿಎಸ್ ಪಕ್ಷವನ್ನು ಮಾತ್ರ ಏಕೆ ಗುರಿ ಮಾಡುತ್ತೀರ ಎಂದು ವರದಿಗಾರರನ್ನೇ ಪ್ರಶ್ನಿಸಿದ ಅವರು, ನಮ್ಮ ಪಕ್ಷಕ್ಕೆ ಇತರೆ ಪಕ್ಷದ ಕಾರ್ಯಕರ್ತರು ನಾಯಕರು ಬಂದರೆ ಹೆಚ್ಚಿನ ಬಲ ಬರುತ್ತದೆ ಎಂದು ಹೇಳಿದರು.
ಪಕ್ಷ ಟಾಸ್ಕ್ ನೀಡಿದರೆ ಜೆಡಿಎಸ್ ಶಾಸಕರನ್ನು ಒಡೆದು ಕಾಂಗ್ರೆಸ್‌ಗೆ ತರುತ್ತೇನೆ ಎಂಬ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಸಿದ ಸಚಿವರು, ಯೋಗೇಶ್ವರ್ ಅವರು ಗೆಲುವು ಸಾಸಿದ ಹುಮ್ಮಸ್ಸು ಹಾಗೂ ಕಾಂಗ್ರೆಸ್ ಪಕ್ಷದ ಮೇಲಿನ ವಿಶ್ವಾಸದಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಂತೆ, ಆದರೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.
ಒಂದು ಪಕ್ಷದಲ್ಲಿ ಶಾಸಕರನ್ನು ತಯಾರಿಸುವುದೇ ಕಾರ್ಯಕರ್ತರು. ಆದ್ದರಿಂದ, ಮೊದಲು ಕಾರ್ಯಕರ್ತರು ಬರಬೇಕು. ಕಾರ್ಯಕರ್ತರೇ ಪಕ್ಷದ ಶಕ್ತಿ ಎಂದ ಅವರು, ಬೇರೆ ಪಕ್ಷದಿಂದ ಬರುವ ಕಾರ್ಯ ಶಿವಮೊಗ್ಗದಿಂದಲೇ ಆದರೂ ಆಗಬಹುದು, ಬೇರೆ ಜಿಲ್ಲೆಯಿಂದಾದರೂ ಆಗಬಹುದು. ನಮ್ಮ ಜಿಲ್ಲೆಯನ್ನೇ ಏಕೆ ಗುರುತು ಮಾಡಿ ಹೇಳುತ್ತೀರಿ ಎಂದು ಮರು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಬೋವಿ ಅಭಿವೃದ್ಧಿ ನಿಗಮ ರವಿಕುಮಾರ್, ಕಲ ಗೋಡು ರತ್ನಾಕರ, ರಾಘವೇಂದ್ರ ಇದ್ದರು.