ಶಿವಮೊಗ್ಗ,ಅ. 06: ನಗರದ ಹೊರವಲಯ ಗೆಜ್ಜೇನಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಸಂಚರಿಸುತ್ತಿರುವ ಮಾಹಿತಿ ಕೇಳಿಬಂದಿದ್ದು, ಇದು ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
‘ಮೇಯಲು ತೆರಳಿದ್ದ ಆಕಳೊಂದರ ಮೇಲೆ ಚಿರತೆ ದಾಳಿ ನಡೆಸಿದೆ. ಅದೃಷ್ಟವಶಾತ್ ಚಿರತೆ ದಾಳಿಯಿಂದ ಆಕಳು ತಪ್ಪಿಸಿಕೊಂಡು ಬಂದಿದೆ. ಆಕಳ ಮೈಮೇಲೆ ಪರಚಿದ ಗಾಯಗಳಾಗಿವೆ’ ಎಂದು ಸ್ಥಳೀಯ ನಿವಾಸಿಯೂ ಆದ ಕೋಟೆಗಂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ದೂದ್ಯನಾಯ್ಕ್ ಅವರು ತಿಳಿಸಿದ್ದಾರೆ.
‘ಗ್ರಾಮದ ಜನವಸತಿ ಪ್ರದೇಶದ ಬಳಿಯೇ ಚಿರತೆ ಸಂಚಾರ ನಡೆಸುತ್ತಿರುವ ಮಾಹಿತಿಗಳಿವೆ. ಕೆಲ ಗ್ರಾಮಸ್ಥರು ಗಮನಿಸಿದ್ದಾರೆ. ಚಿರತೆ ಭೀತಿಯಿಂದ ಹೊಲಗದ್ದೆ, ತೋಟಗಳಿಗೆ ಗ್ರಾಮಸ್ಥರು ಹೋಗಲು ಭಯ ಪಡುವಂತಾಗಿದೆ’ ಎಂದು ಗ್ರಾಮದ ಯುವ ಮುಖಂಡ ಟೀಕ್ಯಾನಾಯ್ಕ್ ಅವರು ಹೇಳಿದ್ದಾರೆ.
ತಕ್ಷಣವೇ ಅರಣ್ಯ ಇಲಾಖೆಯು ಸ್ಥಳಕ್ಕಾಗಮಿಸಿ ಪರಿಶೀಲಿಸಬೇಕು. ಜನವಸತಿ ಪ್ರದೇಶಕ್ಕೆ ಚಿರತೆ ಆಗಮಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.