ಶಿವಮೊಗ್ಗ, ಫೆ. 26 : ತಾಲೂಕಿನ ತ್ಯಾವರೆಕೊಪ್ಪ ಮೃಗಾಲಯದ ಸ್ಟಾರ್ ಅಟ್ರಾಕ್ಟರ್ ಆಗಿ ಗಮನ ಸೆಳೆಯುತ್ತಿದ್ದ ಏಕೈಕ ಗಂಡು ಹುಲಿ ‘ವಿಜಯ್'(17) ಮೃತಪಟ್ಟಿದೆ.
ತ್ಯಾವರೆಕೊಪ್ಪ ಮೃಗಾಲಯದಲ್ಲೇ ಜನಿಸಿದ್ದ ಗಂಡು ಹುಲಿ ವಿಜಯ್, ವಯೋಸಹಜ ಆರೋಗ್ಯ ಸಮಸ್ಯೆ ಸ್ನಾಯು ನೋವಿನಿಂದಾಗಿ ಆಹಾರ ತ್ಯಜಿಸಿತ್ತು. ಕಳೆದ ಒಂದು ತಿಂಗಳಿಂದ ಯಾವುದೇ ಚಟುವಟಿಕೆಯಿಲ್ಲದೇ ಇದ್ದ ಹುಲಿಯನ್ನ ಸಫಾರಿಯ ಹುಲಿ ಮನೆಯಲ್ಲಿ ಆರೈಕೆ ಮಾಡಲಾಗುತ್ತಿತ್ತು.
ಆದರೇ, ಚಿಕಿತ್ಸೆ ಫಲಿಸದೇ ನಿನ್ನೆ ಹುಲಿ ವಿಜಯ್ ಮೃತಪಟ್ಟಿದ್ದು, ಮೃಗಾಲಯ ನಿಯಮದಂತೆ ಅಂತ್ಯಸಂಸ್ಕಾರ ಮಾಡಲಾಗಿದೆ.
ಹುಲಿ ವಿಜಯ್ ಸಾವಿನಿಂದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಗಂಡು ಹುಲಿಗಳೇ ಇಲ್ಲದಂತಾಗಿದ್ದು, ಒಟ್ಟು ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿಕೆಯಾಗಿದೆ. ದಶಮಿ(17), ಸೀತಾ(16), ಪೂರ್ಣಿಮಾ(12) ಹಾಗೂ ನಿವೇದಿತಾ(12) ಎಂಬ ಹೆಣ್ಣು ಹುಲಿಗಳಿದ್ದು, ಪ್ರವಾಸಿಗರ ವೀಕ್ಷಣೆಗೆ ಲಭ್ಯವಿರಲಿವೆ ಎಂದು ತ್ಯಾವರೆಕೊಪ್ಪ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮರಾಕ್ಷ ತಿಳಿಸಿದ್ದಾರೆ.