ಬಡವರ ಉದ್ಯೋಗದ ಹಕ್ಕನ್ನು ಕಸಿದ ಕೇಂದ್ರ : ಸಚಿವ ಮಧು ಬಂಗಾರಪ್ಪ

Kranti Deepa
ಶಿವಮೊಗ್ಗ,ಜ.10  : ಗ್ರಾಮೀಣ ಜನರ ಬದುಕನ್ನು ಹಾಗೂ ಬಡವರಿಗೆ ಉದ್ಯೋಗ ಕೊಡುವ ದೃಷ್ಟಿಯಿಂದ ಜಾರಿಗೆ ತಂದಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಈಗಿನ ಕೇಂದ್ರ ಸರ್ಕಾರ ರದ್ದುಪಡಿಸಿದ್ದು, ಇದರಿಂದಾಗಿ ಬಡವರ ಉದ್ಯೋಗವನ್ನು ಕಸಿದುಕೊಂಡಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆರೋಪಿಸಿದರು.ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿಯವರ ಹೆಸರಿನಲ್ಲಿ ಇದ್ದಂತಹ ಯೋಜನೆಯ ಹೆಸರನ್ನೇ ಬದಲಾಯಿಸಿ. ಬಡವರ ಬದುಕಿಗೆ ಆಸರೆಯಾಗಿದ್ದ ಕೆಲಸವನ್ನೇ ಕಿತ್ತು ಕೊಳ್ಳುವ ಮೂಲಕ ನಿರುದ್ಯೋಗಿಗಳನ್ನಾಗಿ ಕೇಂದ್ರ ಸರ್ಕಾರ ರೂಪಿಸುತ್ತಿದೆ ಎಂದು ದೂರಿದರು.
ಕಳೆದ 20 ವರ್ಷಗಳಿಂದ ದೇಶದ ಗ್ರಾಮೀಣ ಕೂಲಿಕಾರರು ಮತ್ತು ಸಣ್ಣ ರೈತರ ಜೀವನೋಪಾಯಕ್ಕೆ ಆಧಾರವಾಗಿದ್ದ ಹಾಗೂ ಉದ್ಯೋಗವನ್ನು ಸ್ಥಳೀಯವಾಗಿಯೇ ಕೇಳಿ ಪಡೆಯುವ ಹಕ್ಕು ನೀಡಿದ್ದ ಮನರೇಗಾ ಕಾಯ್ದೆಯನ್ನು, ಮೋದಿ ಸರ್ಕಾರವು ಜನರ ಜೊತೆ ಚರ್ಚೆ ಮಾಡದೆ, ರಾಜ್ಯಗಳ ಜೊತೆ ಸಮಾಲೋಚನೆ ಮಾಡದೆ, ಅಭಿಪ್ರಾಯವನ್ನೂ ಪಡೆಯದೆ ಸರ್ವಾಧಿಕಾರಿ ಧೋರಣೆಯ ಮೂಲಕ ಧ್ವಂಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ 12.16 ಕೋಟಿ ಕಾರ್ಮಿಕರನ್ನು, ಅವರಲ್ಲಿ ಶೇ.53.61  ರಷ್ಟು ಸಂಖ್ಯೆಯಲ್ಲಿದ್ದ 6.21 ಕೋಟಿ ಮಹಿಳೆಯರ ಬದುಕನ್ನು ಹಾಗೂ ಶೇ.17 ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ.11 ರಷ್ಟು ಪರಿಶಿಷ್ಟ ಪಂಗಡದ ನರೇಗಾ ಕೂಲಿ ಕಾರ್ಮಿಕರ ಬದುಕಿಗೆ ಬೆಂಕಿ ಇಟ್ಟಿದೆ ಎಂದ ಅವರು, ರಾಜ್ಯದಲ್ಲಿ 2025-26 ರಲ್ಲಿ ಉತ್ತಮ ಮಳೆಯಾದ ಸಂದರ್ಭದಲ್ಲೂ 31.18 ಲಕ್ಷ ನರೇಗಾ ಕೂಲಿ ಕಾರ್ಮಿಕರಿದ್ದಾರೆ. ಅದರಲ್ಲಿ 36.75  ಲಕ್ಷ (ಶೇ.51.6) ಮಹಿಳೆಯರು ಇದ್ದಾರೆ. ಈ ಎಲ್ಲರ ಉದ್ಯೋಗದ ಹಕ್ಕನ್ನು ಮೋದಿ ಸರ್ಕಾರ ನೀರು ಪಾಲು ಮಾಡಿದೆ ಎಂದರು.
 ಜನರು ನೆಮ್ಮದಿಯಿಂದ ಜೀವಿಸುವ ಯಾವುದೇ ಕಾನೂನು ಆಗಲಿ, ಕಾರ್ಯಕ್ರಮವಾಗಲಿ, ಯೋಜನೆಯಾಗಲಿ ಅದನ್ನು ಹೇಗೆ ನಾಶ ಮಾಡಬೇಕು ಎಂಬುದನ್ನು ಅಧ್ಯಯನ ಮಾಡಿ ಕೊಡುವುದೆ ಬಿಜೆಪಿಯ ಮಾರ್ಗದರ್ಶಕರಾಗಿರುವ ಆರ್.ಎಸ್.ಎಸ್. ಮುಂತಾದ ಸಂಘಟನೆಗಳ ಕೆಲಸವೂ ಆಗಿರುವಂತಿದೆ.ಹಿಂದೆ ಆಡಳಿತ ನಡೆಸಿದ್ದ ಯುಪಿಎ ಸರ್ಕಾರವು ಉದ್ಯೋಗದ ಹಕ್ಕು, ಶಿಕ್ಷಣದ ಹಕ್ಕು, ಆಹಾರದ ಹಕ್ಕು, ಅರಣ್ಯವಾಸಿಗಳ ಕಾಡಿನ ಮೇಲಿನ ಹಕ್ಕು, ಮಾಹಿತಿ ಹಕ್ಕು ಮುಂತಾದ ಜನಪರವಾದ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಆದರೆ ಮೋದಿ ಸರ್ಕಾರ ಸುಳ್ಳು ಪಚಾರ ಮಾಡಿ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ಹಕ್ಕುಗಳನ್ನು ಜನರಿಗೆ ಒದಗಿಸುವ ಕಾಯ್ದೆಗಳನ್ನು ನಿರಂತರವಾಗಿ ದುರ್ಬಲಗೊಳಿಸುತ್ತಾ, ಕಡೆಯದಾಗಿ ಕಿತ್ತು ಹಾಕುತ್ತಾ ಬಂದಿದೆ. ಜನರ ಕಲ್ಯಾಣಕ್ಕಾಗಿ ಒಂದು ಕ್ಷಣವೂ ಯೋಜನೆ ಮಾಡದ ಜನವಿರೋಧಿ ಸರ್ಕಾರವಾಗಿರುವ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ನಿರಂತರವಾಗಿ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ ಎಂದರು.
ದೇಶದ ಸಣ್ಣ ರೈತರು, ಕೂಲಿ ಕಾರ್ಮಿಕರು, ತಾವು ವಾಸಿಸುವ ಜಾಗದಲ್ಲಿದ್ದುಕೊಂಡ, ತಮ್ಮ ಸಮೀಪದ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ತಮ್ಮ ಕೃಷಿ ಕೆಲಸಗಳ ಜೊತೆಯಲ್ಲಿ ಮನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಕುಟುಂಬವನ್ನು ಹಾಗೂ ತಮ್ಮ ಗ್ರಾಮಗಳ ಆರ್ಥಿಕತೆಯನ್ನು ಕಟ್ಟಿ ಬೆಳೆಸುತ್ತಿದ್ದರು. ಆದರೆ, ಅವುಗಳನ್ನೆಲ್ಲ ಧ್ವಂಸ ಮಾಡಿರುವ ಮೋದಿ ಸರ್ಕಾರವು ಜನರನ್ನು ಕಾರ್ಪೊರೇಟ್ ಕೃಷಿ ಕಂಪನಿಗಳಿಗೆ ಅಗ್ಗದ ಕೂಲಿ ಆಳುಗಳನ್ನು ಒದಗಿಸಲು ಸಂಚು ರೂಪಿಸಿದೆ ಎಂದರು.
ಈ ಹಿಂದೆ, ಯೋಜನೆಗಳನ್ನು ಜಾರಿ ಮಾಡುವಾಗ ಪಾರ್ಲಿಮೆಂಟಿನಲ್ಲೆ ಬಿಜೆಪಿ ವಿರೋಧಿಸಿತ್ತು. ಫುಡ್ ಗ್ಯಾರಂಟಿ ಬಿಲ್ ಅನ್ನು ವೋಟ್ ಗ್ಯಾರಂಟಿ ಬಿಲ್ ಎಂದು ಗೇಲಿ ಮಾಡಿದ್ದರು. ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ಹಿಂದಿನ ಸರ್ಕಾರಗಳು ರೂಪಿಸಿದ್ದ ಬಹುಪಾಲು ಯೋಜನೆಗಳನ್ನು ಬುಡಮೇಲು ಮಾಡಿ ಅವುಗಳನ್ನು ಹಾಳು ಮಾಡಿದೆ. ಮೋದಿ ಸರ್ಕಾರ ಕಳೆದ ಹನ್ನೊಂದುವರೆ ವರ್ಷಗಳಲ್ಲಿ ಮಾಡಿದ್ದ ದೊಡ್ಡ ಸಾಧನೆ.
ಉತ್ತಮವಾಗಿ ಕೆಲಸ ಮಾಡುವ ಗ್ರಾಮ ಪಂಚಾಯತಿಗಳು ವರ್ಷಕ್ಕೆ ಸರಾಸರಿ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನಗಳನ್ನು ಬಳಸಿಕೊಂಡು ದೇಶದಲ್ಲಿ ಕೋಟ್ಯಂತರ ಆಸ್ತಿಗಳನ್ನು ಸೃಜನೆ ಮಾಡಿವೆ.
ದೇಶದಲ್ಲಿ ಬರಗಾಲವಿದ್ದ ವರ್ಷವಾದ 2024-25 ರಲ್ಲಿ 19.28 ಕೋಟಿ ಜನ ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದರು. ಕರ್ನಾಟಕದಲ್ಲಿ 1.35 ಕೋಟಿ ಕಾರ್ಮಿಕರು ನರೇಗಾ ಯೋಜನೆಯ ಮೂಲಕ ತಮ್ಮ ಬದುಕು ಬೀದಿ ಪಾಲಾಗದಂತೆ ನೋಡಿಕೊಂಡಿದ್ದರು. ಈಗ ಇವರೆಲ್ಲರ ಮೇಲೆ ಮೋದಿ ಸರ್ಕಾರ ತನ್ನ ಕ್ರೂರ ಕಣ್ಣುಗಳನ್ನು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅರ್.ಪ್ರಸನ್ನಕುಮಾರ್, ಚೇತನ್, ಎಸ್.ರವಿಕುಮಾರ್, ಕಲಗೋಡು ರತ್ನಾಕರ್, ಸೈಯ್ಯದ್ ವಾಹಿದ್ ಅಡ್ಡು, ಮುಂತಾದವರು ಉಪಸ್ಥಿತರಿದ್ದರು.

Share This Article
";