ಶಿವಮೊಗ್ಗ,ಫೆ. 20 : ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ (ಅಣ್ಣೇಗೌಡ) ಕೊಲೆ ಪ್ರಕರಣದ ಆರೋಪಿಗಳು ಇಂದು ವಿಚಾರಣೆಗೆ ಶಿವಮೊಗ್ಗ ನ್ಯಾಯಾಲಯಕ್ಕೆ ಆಗಮಿಸಿದ್ದರು.
ಹಂದಿ ಅಣ್ಣಿ ಕೊಲೆ ಪ್ರಕರಣದ ವಿಚಾರಣೆ ದಿನಾಂಕ ಇಂದು ನಿಗದಿಯಾಗಿದ್ದರ ಹಿನ್ನಲೆ ಕೋರ್ಟ್ ಗೆ ಆರೋಪಿಗಳು ಹಾಜರಾಗಿದ್ದರು, ಸದ್ಯ ಜಾಮೀನಿನ ಮೇಲೆ ಹೊರ ಬಂದಿರುವ ಆರೋಪಿಗಳಿಗೆ ಬೆದರಿಕೆ ಇರುವ ಕಾರಣ ನ್ಯಾಯಾಲಯ ಸುತ್ತ ಬಿಗಿ ಪೋಲೀಸ್ ಭದ್ರತೆ ಹಾಕಲಾಗಿತ್ತು.
2023 ಮಾರ್ಚ್ ನಲ್ಲಿ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳಾದ ಆಂಜನೇಯ ಮತ್ತು ಮಧು ಎಂಬುವರು ಶಿವಮೊಗ್ಗ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿ ಬೈಕ್ ನಲ್ಲಿ ತಮ್ಮ ಸ್ವಂತ ಊರು ಭಾನುವಳ್ಳಿಗೆ ತೆರಳುವ ವೇಳೆ ಸ್ಕಾರ್ಪಿಯೋ ವಾಹನದಲ್ಲಿದ್ದ ತಂಡ ಇವರನ್ನು ಹಿಂಬಾಲಿಸಿ ನ್ಯಾಮತಿ ತಾಲೂಕಿನ ಗೋವಿನಕೋವಿ ಚೀಲೂರು ಗ್ರಾಮಗಳ ನಡುವೆ ಮಧು ಹಾಗು ಆಂಜನೇಯ ಮೇಲೆ ದಾಳಿ ನಡೆಸಿದ್ದರು.
ದಾಳಿ ವೇಳೆ ಆಂಜನೇಯ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮಧು ತೀವ್ರವಾಗಿ ಗಾಯಗೊಂಡು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದನು. ಈ ಘಟನೆ ಹಿನ್ನಲೆ ಇಂದು ಶಿವಮೊಗ್ಗ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾದ ಚಂದನ್, ಫಾರೂಕ್, ಮಧು ಸೇರಿದಂತೆ ಇನ್ನಿತರ ಆರೋಪಿಗಳಿಗೆ ಪೋಲೀಸ್ ಭದ್ರತೆ ನೀಡಲಾಗಿತ್ತು. ಹೆಚ್ಚಿನ ಭದ್ರತೆಗಾಗಿ ನ್ಯಾಯಾಲಯದ ಸುತ್ತ ಡ್ರೋಣ್ ಹಾರಾಟ ನಡೆಸಿ ಎಲ್ಲರ ಮೇಲೆ ನಿಗಾ ವಹಿಸಲಾಗಿತ್ತು.