ತೀರ್ಥಹಳ್ಳಿ , ಜು. 16 :ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳಿಗೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ₹25,000 ದಂಡ ವಿಧಿಸಿ ಆದೇಶಿಸಿದೆ. ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 6 ತಿಂಗಳು ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪು ನೀಡಿದೆ.
2022ರ ಜುಲೈ 12ರಂದು ದಾಖಲಾಗಿದ್ದ ಪ್ರಕರಣದ ಕುರಿತಾಗಿ ಕೋರ್ಟ್ ಈ ತೀರ್ಪು ನೀಡಿದೆ. ಅಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಠಲ ನಗರದಲ್ಲಿ ಗಾಂಜಾ ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಅಂದಿನ ಡಿವೈಎಸ್ಪಿ ಶಾಂತವೀರ್ ನೇತೃತ್ವದ ತಂಡ ದಾಳಿ ನಡೆಸಿತ್ತು.
ಪಶ್ಚಿಮ ಬಂಗಾಳ ಮೂಲದ 1) ಅಲೋಕ್ ಮಂಡಲ್ (34), 2) ಶ್ರೀಬಾಷ್ ಸರ್ಕಾರ್ (20), 3) ಅಮ್ರಿತ್ ಮಂಡಲ್ (27), 4) ಸಂಕರ್ ಬ್ಯಾಪಾರಿ (28) ಮತ್ತು 5) ಹರಧನ್ ಮಂಡಲ್ (32) ಎಂಬುವರನ್ನು ಬಂಧಿಸಿದ್ದ ಪೊಲೀಸ್ ತಂಡ ಒಟ್ಟಾರೆ,. 1 ಕೆಜಿ 564 ಗ್ರಾಂ ತೂಕದಗಾಂಜಾ , ₹3550 ನಗದು ಮತ್ತು 5 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿತ್ತು. ಅಷ್ಟೆ ಅಲ್ಲದೆ, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ 20(b)(ii)(B), 27(b) NDPS ಕಾಯ್ದೆ ಅಡಿ ಕೇಸ್ ದಾಖಲಿಸಿತ್ತು.
ಈ ಪ್ರಕರಣ ಸಂಬಂಧ ಆಗಿನ ತನಿಖಾಧಿಕಾರಿ, ತೀರ್ಥಹಳ್ಳಿ ಪೊಲೀಸ್ ಠಾಣೆಯ ಪಿ.ಐ. ಅಶ್ವತ್ ಗೌಡ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.ಬಳಿಕ ಕೋರ್ಟ್ನಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸುರೇಶ್ ಕುಮಾರ್ ಎ.ಎಂ. ಅವರು ವಾದ ಮಂಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜುನಾಥ್ ನಾಯಕ್ ಅವರು ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಪು ನೀಡಿದ್ದಾರೆ.