ಶಿವಮೊಗ್ಗ,ಡಿ.29 : ಕುವೆಂಪು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರು ನಾಡಿಗೆ ನೀಡಿದ ಸಂದೇಶ ಸಾರ್ವಕಾಲಿಕ ವಾಗಿದೆ. ಕುವೆಂಫು ನಾಡುನುಡಿಯನ್ನು ಪ್ರೀತಿಸಿದ ವರು, ಅವರ ಕೃತಿ ನಮ್ಮೆಲ್ಲರ ಕಿರೀಟಪ್ರಾಯವಾಗಿದೆ. ರಾಮಾಯಣ ಕೃತಿಯಲ್ಲಿ ಊರ್ಮಿಳೆಯ ಪಾತ್ರದ ಕುರಿತು ಕವಿ ಕುವೆಂಪು ಅವರು ವಿಶೇಷ ಬೆಳಕು ಚೆಲ್ಲಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ಎಲ್ಲರಲ್ಲೂ ವಿಶ್ವಪ್ರೇಮ, ಪ್ರಕೃತಿ ಪ್ರೇಮವನ್ನು ಬೆಳೆಸಿದ್ದಾರೆ ಎಂದು 2025 ರ ರಾಷ್ಟ್ರೀಯ ಕುವೆಂಪು ಪುರಸ್ಕಾರಕ್ಕೆ ಭಾಜನರಾದ ಕೊಂಕಣಿ ಮತ್ತು ಮರಾಠಿ ದ್ವಿಭಾಷಾ ಕವಿ ಮಹಾಬಳೇಶ್ವರ ಸೈಲ್ ಅಭಿಪ್ರಾಯಪಟ್ಟರು.
ಅವರು ಸೋಮವಾರ ಕುಪ್ಪಳಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ 121 ನೇ ಜನ್ಮದಿನೋತ್ಸವದ ನಿಮಿತ್ತ ಆಚರಿಸಲಾಗುವ ವಿಶ್ವಮಾನದ ದಿನಾಚರಣೆ ಯಂದು ಸಾಹಿತಿಗಳಿಗೆ ನೀಡಲಾಗುವ ಕುವೆಂಪು ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
ರಾಮಾಯಣ ದರ್ಶನಂ ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡತಿ ಅವು ಗದ್ಯಮಹಾಕಾವ್ಯಗಳೇ ಆಗಿವೆ. ಅವರ ವೈಚಾರಿಕ ನಿಲುವು ನಮಗೆಲ್ಲರಿಗೂ ಜೀವನ ವಿಧಾನಗಳಾಗಿವೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಮಾತನಾಡಿ, ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಪ್ರಕೃತಿಯ ಮಹತ್ವ ಸಾರಿದ ಕುವೆಂಪು ಅವರ ಆಶಯದಂತೆ ಮಾನವೀಯತೆ, ಮನುಷ್ಯತ್ವವನ್ನು ಪಠ್ಯದಲ್ಲಿ ಅಳವಡಿಸಲಾಗುತ್ತಿದೆ. ನೀತಿ ಶಿಕ್ಷಣವನ್ನು ಪ್ರಸಕ್ತ ಸಾಲಿನಿಂದ ಬೋಸಲು ಕ್ರಮಕೈಗೊಳ್ಳ ಲಾಗಿದೆ. ಕನ್ನಡ ಭಾಷೆಯ ಉಳಿವು-ವಿಕಾಸ, ಶಿಕ್ಷಣಕ್ಕೆ ಒತ್ತು ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಒಂದರಿಂದ ಹತ್ತನೆ ತರಗತಿಯವರೆಗಿನ ಎಲ್ಲಾ ಪಠ್ಯಪುಸ್ತಕಗಳಲ್ಲಿ ಕುವೆಂಪು ವಿರಚಿತ ನಾಡಗೀತೆ ಯನ್ನು, ಗಾಂಜಿಯವರ ಸಪ್ತಪಾತಕಗಳು ಮತ್ತು ಧ್ಯಾನಸ್ಥ ಗಾಂಜಿಯವರ ಭಾವಚಿತ್ರವನ್ನು ಮುದ್ರಿ ಸಲಾಗುತ್ತಿದೆ. ಅಂತೆಯೇ ಜಾತ್ಯತೀತ ಭಾವವನ್ನು ಪ್ರತಿಬಿಂಬಿಸುವ ಸಂವಿಧಾನದ ಪೀಠಿಕೆಯನ್ನು ಅಚ್ಚು ಹಾಕಿಸಲು ಉದ್ದೇಶಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಜಾತಿ ಇಂದು ಎಲ್ಲಾ ನಾಯಕರ ಊರುಗೋಲಾಗಿದೆ. ತತ್ವ ಸಿದ್ಧಾಂತಗಳ ಬದಲಾಗಿ ಜಾತಿ ವ್ಯವಸ್ಥೆ ಬಂದು ನಿಂತಿದೆ. ಇಂತಹ ಸಂದರ್ಭ ದಲ್ಲಿ ಮನುಕುಲಕ್ಕೆ ಮಾರ್ಗದರ್ಶನ ನೀಡಿದ ಕುವೆಂಪು ಅವರ ಸಾಹಿತ್ಯವನ್ನು ಅರಿತು ನಡೆಯುವ ಅಗತ್ಯವಿದೆ ಎಂದರು.
ವಿಧಾನ ಪರಿಷತ್ಸದಸ್ಯೆ ಬಲ್ಕೀಷ್‌ಭಾನು ಅವರು ಕುವೆಂಪು ಕೃತಿ ಬೊಮ್ಮನಹಳ್ಳಿಯ ಕಿಂದರಿಜೋಗಿ ಕೃತಿ 100 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ
ಕೃತಿಯಿಂದಾದ ಭಾಗಗಳ ಚಿತ್ರಗಳನ್ನು ಮುದ್ರಿಸಿದ 2026 ರ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿದರು. ಕಾಡಾ ಅಧ್ಯಕ್ಷ ಡಾ|| ಅಂಶುಮಂತ್, ರಾಷ್ಟ್ರಕವಿ ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ಶೈಕ್ಷಣಿಕ ಸಂಚಾಲಕ ಕೇಶವ ಮಳಗಿ, ದೇವಂಗಿ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ಕುಮಾರ್, ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿ ದಾಳ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ನಾಡಿನ ಹಿರಿಯ ಕವಿ-ಕಲಾವಿದರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಕುವೆಂಪು ತಮ್ಮ ಸಾಹಿತ್ಯದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾಬೀತುಪಡಿಸಿದ್ದಾರೆ. ಕನ್ನಡ ಭಾಷೆಯ ಹಿರಿಮೆಯನ್ನು ತಮ್ಮ ಸಾಹಿತ್ಯದ ಮೂಲಕ ವಿಶ್ವಕ್ಕೆ ಪರಿಚಯಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿಯ ಮೂಲಕ ಕುಪ್ಪಳಿ ಎಲ್ಲಾ ಭಾಷಿಕರ ಒಕ್ಕೂಟವಾಗಿ ಪ್ರತಿಬಿಂಬಿತವಾಗಿದೆ.
– ಪ್ರೊ. ಶರತ್ ಅನಂತಮೂರ್ತಿ,
ಕುವೆಂಪು ವಿವಿ ಕುಲಪತಿ.
ಕುವೆಂಪು ಪ್ರತಿಷ್ಟಾನದ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕುವೆಂಪು ಕಲಾಕ್ಷೇತ್ರದ ನಿರ್ಮಾಣಕ್ಕೆ ಅನೇಕ ಜನ ದಾನಿಗಳು ಮುಂದಾಗಿದ್ದಾರೆ. 8-9 ಕೋಟಿ. ರೂ.ಗಳ ಅಗತ್ಯವಿದ್ದು, ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸಲು ಸಹಕಾರ ನೀಡಬೇಕು. ಕುವೆಂಪು ವಿರಚಿತ ನಾಡಗೀತೆಯನ್ನು ಜನಸಾಮಾನ್ಯರು ಅರ್ಥೈಸಿಕೊಳ್ಳುವಂತೆ ಕಾರ್ಯಕ್ರಮವನ್ನು ರೂಪಿಸಬೇಕು. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಕುವೆಂಪು ಸಾಹಿತ್ಯದ ಕುರಿತು ಚರ್ಚೆ, ಕಮ್ಮಟಗಳು, ಪ್ರಬಂಧ ಸ್ಪರ್ಧೆಗಳು ನಡೆಯುವಂತಾಗಬೇಕು.
– ಬಿ.ಎಲ್. ಶಂಕರ್
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಶಯದಂತೆ ಶಿವಮೊಗ್ಗ ಸಮೀಪದ ವಿಮಾನ ನಿಲ್ದಾಣಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ.
-ಆರಗ ಜ್ಞಾನೇಂದ್ರ
