ಶಿಕಾರಿಪುರ,ನ.25 : ತಾಲೂಕಿನ ಇತಿಹಾಸದಲ್ಲಿ ಹೋರಿ ಸ್ಪರ್ಧೆಗೆ ಇಳಿದ ಮೊದಲ ಹೋರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಹಾರಾಜ ( 20 ) ಎಂಬ ಹೆಸರಿನ ಹೋರಿ ವಯಸ್ಸಾದ ಹಿನ್ನೆಲೆ ಯಲ್ಲಿ ಸೋಮವಾರ ಮೃತಪಟ್ಟಿದೆ.
ಮಹಾರಾಜ ಹೋರಿ ಹಾನಗಲ್ ಹಾವೇರಿ ಹಾಗೂ ಶಿಕಾರಿಪುರದಲ್ಲಿ ಬಹಳಷ್ಟು ಹೆಸರು ವಾಸಿಯಾಗಿತ್ತು. ಹಾಗೆಯೇ ಒಂದು ಕಾಲದಲ್ಲಿ ಹೋರಿ ಹಬ್ಬದಲ್ಲಿ ವಿಪರೀತ ಯಶಸ್ಸು ಗಳಿಸಿ ಸುತ್ತ ಮುತ್ತ ತಾಲೂಕಿನ ನೆಚ್ಚಿನ ಹೋರಿಯಾಗಿ ಗುರುತಿಸಿಕೊಂಡಿತ್ತು. ಆ ಹೋರಿ ಈಗ ವಯಸ್ಸಾದ ಹಿನ್ನಲೆ ಮೃತ ಪಟ್ಟಿದ್ದು, ಇಡೀ ಊರಿನಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದೆ.
ಮಹಾರಾಜ ಹೋರಿ ವಿಶೇಷತೆ:
ಹಾನಗಲ್, ಹಾವೇರಿ ಶಿಕಾರಿಪುರ ಹಾಗೆಯೇ ಹಲವು ಉತ್ತರ ಕರ್ನಾಟಕ ಭಾಗಗಳಲ್ಲಿ ಹೋರಿ ಹಬ್ಬವನ್ನು ಪ್ರತಿಷ್ಠೆಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಒಂದೊಂದು ಹೋರಿಗಳು ಮೆಡಲನ್ನು ಗೆಲ್ಲುವ ಮೂಲಕ ತಾನು ಸಾಕಿದ ಸಾಹುಕಾರನ ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಅದೇ ರೀತಿ ಈ ಮಹಾರಾಜ ಹೋರಿಯು ಸಹ ಸಾಕಷ್ಟು ಮೆಡಲನ್ನು ಗೆದ್ದು ಅದರ ಸಾಹುಕಾರ ಕುಮಾರ್ ಗೆ ಕೀರ್ತಿಯನ್ನು ತಂದುಕೊಟ್ಟಿತ್ತು. ಒಂದೇ ವರ್ಷದಲ್ಲಿ ಏಳು ಬಹುಮಾನಗಳನ್ನು ಗೆದ್ದು ಕೊಂಡ ಕೀರ್ತಿ ಇದಕ್ಕಿದೆ.
ಹೋರಿ ಸ್ಪರ್ಧೆಯ ವೀರ:
ಹಟ್ಟಿ ಹಬ್ಬಗಳಲ್ಲಿ. ಮೂರು ವಿಧದಲ್ಲಿ ಹೋರಿಯನ್ನು ಓಡಿಸಲಾಗುತ್ತದೆ. ಅದರಲ್ಲಿ ಒಂದು ಪಿಪಿ ಕಟ್ಟಿ ಓಡಿಸುವುದು. ಇನ್ನೊಂದು ಕೊಬ್ಬರಿ ಕಟ್ಟಿ ಓಡಿಸುವುದು. ಕೊನೆಯದಾಗಿ ಸ್ಪೀಡ್ ಗಾಗಿ ಓಡಿಸುವುದು. ಕೆಲವು ಹೋರಿಗಳು ಪೀಪಿ ಕಟ್ಟಿದ್ದರೆ ಮಾತ್ರ ಓಡುತ್ತವೆ ಇನ್ನು ಕೆಲವು ಕೊಬ್ಬರಿ ಕಟ್ಟಿದಾಗ ಮಾತ್ರ ಓಡುತ್ತವೆ. ಇದರ ನಡುವೆ ಆಶ್ಚರ್ಯ ವೆಂದರೆ ಈ ಮಹಾರಾಜ ಹೋರಿ. ಮೂರು ವಿಧದಲ್ಲಿಯೂ ಓಡುತ್ತಿದ್ದ ಮೊಟ್ಟಮೊದಲ ಹೋರಿ ಎಂಬ ಹೆಗ್ಗಳಿಕೆಗೆ ಸಹ ಪಾತ್ರವಾಗಿತ್ತು. ಬಹುಮಾನದಲ್ಲಿ ಬುಲೆಟ್ ಬೈಕ್ ಗೆದ್ದ ಮೊದಲ ಹೋರಿ ಇದಾಗಿತ್ತು
ಮೆರವಣಿಗೆ ಮೂಲಕ ಅಂತ್ಯ ಸಂಸ್ಕಾರ:
ಈ ಹೋರಿ ಸಾವು ಮಾಲೀಕರಿಗೆ ಅಷ್ಟೇ ಅಲ್ಲದೆ. ಇಡೀ ಊರಿನ ಜನರಿಗೆ ಬೇಸರವನ್ನುಂಟು ಮಾಡಿದೆ. ಇಂದು ಊರು ತುಂಬಾ ಮೆರವಣಿಗೆ ಮಾಡಿ ಮಧ್ಯಾನ ಒಂದು ಗಂಟೆಗೆ ವಿಧಿ ವಿಧಾನಗಳ ಮೂಲಕ ಹೋರಿಯ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು. ಹೋರಿ ಮಾಲೀಕ ಶಿಕಾರಿಪುರದ ಗಾಂಧಿನಗರದ ಕುಮಾರ್ ತಿಳಿಸಿದ್ದಾರೆ.