ಜಾಗತಿಕವಾಗಿ ಯೋಚಿಸಿ ಸ್ಥಳೀಯವಾಗಿ ನಿರ್ವಹಿಸಿ

Kranti Deepa

ಶಿವಮೊಗ್ಗ,ಡಿ.26 : ವಿಕಸಿತ ಭಾರತದ ಪ್ರಜೆಗಳಾಗಿ ಜಾಗತೀಕವಾಗಿ ಯೋಚಿಸುತ್ತಾ ಸ್ಥಳೀಯವಾಗಿ ನಮ್ಮ ಊರು, ಸಮಾಜ, ಕುಟುಂಬಕ್ಕಾಗಿ ಯೋಜಿಸಿ ಕಾರ್ಯನಿರ್ವಹಿಸಿ ಎಂದು ಮಂಗಳೂರು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಅಭಿಪ್ರಾಯಪಟ್ಟರು.

ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಗುರುವಾರ ಅಂಬೇಡ್ಕರ್ ಭವನದಲ್ಲಿ ಅಂತಿಮ ವರ್ಷದ ಫಾರ್ಮಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು.

ಪದವಿ ಪ್ರದಾನ ಎಂಬುದು ಬದುಕಿನಲ್ಲಿ ಹೊಸ ದೀಕ್ಷೆ ತೊಡುವ ಸುಸಂದರ್ಭ. ಸ್ವಾರ್ಥದ ಆಲೋಚನೆಗಳಿಗಿಂತ, ನಮ್ಮ ಸಮಾಜದ ಒಳಿತಿನಲ್ಲಿ ನಿಮ್ಮ ಅಭಿವೃದ್ಧಿಯನ್ನು ಕಾಣಿರಿ. ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿರಲಿ.

ಬದುಕಿನ ನಿನ್ನೆ ಇತಿಹಾಸವಾದರೆ, ನಾಳೆ ನಮ್ಮಯ ಭವಿಷ್ಯ. ಇತಿಹಾಸ ಅನ್ವೇಷಣೆಯಲ್ಲಿ ಆದ ಜೀವನ ಅನುಭವಗಳಿಂದ ಭವಿಷ್ಯದ ಗುರಿಯನ್ನು ತಲುಪಲು ಪ್ರಯತ್ನಿಸಿ. ಪ್ರಕೃತಿಯಲ್ಲಿ ಯಾರು ಮುಖ್ಯ, ಅಮುಖ್ಯರೆಂಬ ಸಂಕೇತ ಇರುವುದಿಲ್ಲ.‌ ಎಲ್ಲಾ ಕೆಲಸ ಕಾರ್ಯಗಳು, ವ್ಯಕ್ತಿತ್ವಗಳು ತನ್ನದೇ ಮಹತ್ವವನ್ನು ಪಡೆದಿದೆ. ಬೌದ್ಧಿಕ ಬಂಡವಾಳ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.‌

ಇಂದು ವಿದೇಶಿಗರು ಭಾರತವನ್ನು ಪೂಜ್ಯನೀಯವಾಗಿ ನೋಡುತ್ತಿದ್ದಾರೆ. ವಿದೇಶಿಗರು ತಮ್ಮ ಮಕ್ಕಳಿಗೆ ಭಾರತೀಯರಂತೆ ಕೌಶಲ್ಯಪೂರ್ಣ ವಿದ್ಯಾವಂತರಾಗಿ ಎಂದು ಉದಾಹರಣೆ ಕೊಡುವ ಮಟ್ಟಕ್ಕೆ ನಮ್ಮ ದೇಶದ ಯುವ ಸಮೂಹ ಬೆಳೆದು ನಿಂತಿದೆ. ಭಾರತದ ಜಿಡಿಪಿ ದರವು ಅತ್ಯಧಿಕವಾಗಿ ಬೆಳೆಯುತ್ತಿದೆ. ಭಾರತ ಅದ್ಭುತ ವಿಕಸನದತ್ತ ಪಯಣಿಸುತ್ತಿದ್ದು, ನಾವೀನ್ಯತೆಯ ಅವಕಾಶಗಳನ್ನು ಬಳಸಿಕೊಂಡು ಫಾರ್ಮಸಿ ಪದವೀಧರರು ಸಮಾಜಮುಖಿಯಾಗಿ ಹೊರಹೊಮ್ಮಿ ಎಂದು ಹೇಳಿದರು.

ಎನ್ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಿ. ರಾಜ್ಯದಲ್ಲಿ ನಡೆದ ಬಾಣಂತಿ ಸಾವು ಪ್ರಕರಣಗಳು ನಡೆದಿದ್ದು, ನಿಜಕ್ಕು ನಮ್ಮಯ ದೌರ್ಭಾಗ್ಯ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ನೀವು ಇಂತಹ ಘಟನಾವಳಿಗಳು ನಡೆಯದಂತೆ ಜಾಗರೂಕತೆ ವಹಿಸಿ. ದೇವರ ಹೆಸರಿನಲ್ಲಿ ಉಪವಾಸವಿರುವುದು ಸಾಧನೆಯಲ್ಲ, ತಂದೆ ತಾಯಿಯನ್ನು ಒಂದು ದಿನವೂ ಉಪವಾಸವಿರದಂತೆ ನೋಡಿಕೊಳ್ಳುವುದು ನಿಜವಾದ ಸಾಧನೆ ಎಂದು ಹೇಳಿದರು‌.

ಪ್ರಾಸ್ತಾವಿಕವಾಗಿ ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಫಾರ್ಮಸಿ ಕ್ಷೇತ್ರದ ಉತ್ಪಾದನಾ ವ್ಯವಸ್ಥೆಯಲ್ಲಿ ಗುಣಮಟ್ಟದ ಭರವಸೆ ಅತ್ಯಂತ ಮೂಲಭೂತ ಅವಶ್ಯಕವಾಗಿದೆ. ಇಂದು ತಂತ್ರಜ್ಞಾನವು ಸಮಾಜದಲ್ಲಿ ದೊಡ್ಡ ಪರಿಣಾಮಗಳನ್ನು ಬೀರುತ್ತಿದ್ದು, ಅಂತಹ ತಂತ್ರಜ್ಞಾನದ ಮೂಲಕ ಸಮಾಜದ ಸವಾಲುಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳು ಸನ್ನದ್ಧರಾಗಬೇಕು.

ಇಂದು ಆರೋಗ್ಯ ಕ್ಷೇತ್ರದಲ್ಲಿ ಕ್ಲಿನಿಕಲ್ ಮೆಡಿಸಿನ್‌ನಿಂದ ಇನ್ವೆಸ್ಟಿಗೇಷನ್ ಮೆಡಿಸಿನ್‌ನತ್ತ ವೇಗವಾಗಿ ಚಲಿಸುತ್ತಿದೆ. ಹೆಚ್ಚಿನ ಆಸ್ಪತ್ರೆಗಳಲ್ಲಿ ರೋಗಿಯ ರೋಗ ಲಕ್ಷಣಗಳು ಮತ್ತು   ವರದಿಗಳ ಆಧಾರದ ಮೇಲೆ ಔಷಧ ಚೀಟಿಯನ್ನು ನೀಡಲಾಗುತ್ತಿದೆ. ವೃತ್ತಿಪರ ನೈತಿಕತೆಯೊಂದಿಗೆ ಫಾರ್ಮಸಿಸ್ಟ್ ಗಳು ರೋಗಿಗಳಿಗೆ ತಾವು ನೀಡುತ್ತಿರುವ ಔಷಧಗಳ ಅಡ್ಡ ಪರಿಣಾಮ, ಡೋಸೇಜ್ ಗಳ ಬಗ್ಗೆ ಒಂದಿಷ್ಟು ಅರಿವು ಮೂಡಿಸಲು ಪ್ರಯತ್ನಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕಿ ಶಾಂಭವಿ ನಿರೂಪಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಪದವಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.

Share This Article
";