ಶಿವಮೊಗ್ಗ, ಫೆ.19 : ಜಿಲ್ಲೆಯ ಶಿಕಾರಿಪುರ ಹಾಗೂ ಸಾಗರ ತಾಲೂಕುಗಳ ಗಡಿ ಭಾಗ ಭೈರಾಪುರ ಗ್ರಾಮದ ಭಾಗದ ಬಳಿ ಅಂಬ್ಲಿಗೊಳ ಜಲಾಶಯದ ಹಿನ್ನೀರಿನಲ್ಲಿ ಹುಲಿಯ ಕಳೇಬರ ಮಂಗಳವಾರ ಸಂಜೆ ಪತ್ತೆಯಾಗಿದೆ.
ಹಿನ್ನೀರಿನಲ್ಲಿ ಹುಲಿಯ ಮೃತದೇಹ ಕಂಡುಬರುತ್ತಿದ್ದಂತೆ ಗ್ರಾಮಸ್ಥರು ಅಂಬ್ಲಿಗೊಳ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹುಲಿಯ ಕಳೇಬರವನ್ನು ಮೇಲಕ್ಕೆ ತಂದು, ಸಾಗರದ ವನ್ಯಜೀವಿ ವಿಭಾಗದ ಡಿಎಫ್‌ಓ ಮೋಹನ್ ಅವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ, ಸ್ಥಳಕ್ಕೆ ಬಂದ ಅಧಿಕಾರಿಗಳು ಹುಲಿಯ ಕಳೆಬರಹದ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಹಿನ್ನೀರಿನ ಡ್ಯಾಂ ಹೂಸೂರು ಗ್ರಾಮದಲ್ಲಿಯೇ ಅಂತ್ಯಕ್ರಿಯೆ ನಡೆಸಿದ್ದಾರೆ.
ಹುಲಿ ಇಲ್ಲಿಗೆ ಬಂದಿದ್ದು ಹೇಗೆ:
ಹುಲಿಯು ಸುಮಾರು 9 ವರ್ಷ ಪ್ರಾಯದ್ದಾಗಿದೆ. ಸಾಗರ ಹಾಗೂ ಶಿಕಾರಿಪುರ ಭಾಗದಲ್ಲಿ ಹುಲಿಯ ಓಡಾಟದ ಬಗ್ಗೆ ಕುರುಹುಗಳಿಲ್ಲ. ಈ ಭಾಗದಲ್ಲಿ ಹುಲಿಗಳು ಇಲ್ಲ. ಅಂಬ್ಲಿಗೊಳ ಜಲಾಶಯ ಹಾಗೂ ಸಾಗರ, ಆಯನೂರು ಭಾಗದಲ್ಲಿ ಹುಲಿಗಳ ಚಲನವಲನ ಇರಲಿಲ್ಲ. ಆದರೆ ಹುಲಿ ಇಲ್ಲಿಗೆ ಹೇಗೆ ಬಂತು ಎಂಬ ಅನುಮಾನ ಎಲ್ಲರಲ್ಲಿ ಮೂಡಿದೆ. ಹುಲಿಯು ಭದ್ರಾ ಅಭಯಾರಣ್ಯ ಅಥವಾ ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಬಂದಿರಬಹುದೆಂದು ಇಲಾಖೆ ಅಂದಾಜಿಸಿದೆ.
ಗುಂಡೇಟಿಗೆ ಬಲಿಯಾಗಿರುವ ಶಂಕೆ:
ಹುಲಿಯು ಈ ಭಾಗಕ್ಕೆ ಹೇಗೆ ಬಂತು ಎಂಬುದರ ಬಗ್ಗೆ ಅನುಮಾನ ಮೂಡಿರುವ ಹಿನ್ನೆಲೆಯಲ್ಲಿ ಅದು ಗುಂಡೇಟಿನಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹುಲಿಯ ಹೊಟ್ಟೆಗೆ ಎರಡು ಕಡೆ ಗುಂಡೇಟು ತಗುಲಿರುವ ಶಂಕೆ ವ್ಯಕ್ತವಾಗಿದೆ. ಹುಲಿಯ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಬಂದ ನಂತರ ಸಾವಿಗೆ ಕಾರಣ ಏನೆಂದು ತಿಳಿದುಬರಲಿದೆ.
ಈ ಕುರಿತು ’ ಮಾಹಿತಿ ನೀಡಿದ ಸಾಗರ ವಲಯ ವನ್ಯಜೀವಿ ವಿಭಾಗದ ಡಿಎಫ್‌ಓ ಮೋಹನ್, ”ಹುಲಿಯ ಕಳೇಬರ ಪತ್ತೆ ಆಗುತ್ತಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಆದರೆ ಈ ಭಾಗಕ್ಕೆ ಹುಲಿ ಹೇಗೆ ಬಂತು ಎಂಬ ಮಾಹಿತಿ ಲಭ್ಯವಾಗಿಲ್ಲ. ಇದು ಸುಮಾರು ೯ ವರ್ಷದ ಹುಲಿ ಇರಬಹುದು” ಎಂದು ತಿಳಿಸಿದರು.