ಭದ್ರಾವತಿ,ಫೆ. 13 : ತಾಲೂಕಿನ ಅರಹತೊಳಲು ಗ್ರಾಮದ ಮನೆಯ ಮುಂದೆ ಇಟ್ಟಿದ್ದ ಅಡಿಕೆ ಚೀಲಗಳನ್ನು ಕಳ್ಳತನ ಮಾಡಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಯನೂರು ಕೋಹಳ್ಳಿಯ ಯುವಕನನ್ನು ಬಂಧಿಸಿ ಕಳುವಾದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಅಡಿಕೆ ಕಳುವಾದ ಬಗ್ಗೆ ಹರ್ಷ ಎನ್ನುವವರು ಹೊಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಆಯನೂರು ಕೋಹಳ್ಳಿಯ ಸಯ್ಯದ್ ನವೀದ್ (29 ) ಸಿಕ್ಕಿಬಿದ್ದಿದ್ದಾನೆ. ಈತನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿತನಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವರದಿಯಾದ 2025 ನೇ ಸಾಲಿನ ಎರಡು ಮತ್ತು 2024 ನೇ ಸಾಲಿನ ಎರಡು ಪ್ರಕರಣ ಸೇರಿ ಒಟ್ಟು ನಾಲ್ಕು ಅಡಿಕೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 5 ಲ. ರೂ. ಗಳ 10 ಕ್ವಿಂಟಾಲ್ ಒಣ ಅಡಿಕೆ, ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ 4 ಲಕ್ಷದ ಅಮೇಜ್ ಹೋಂಡಾ ಕಾರ್ ಸೇರಿ 9 ಲಕ್ಷ. ರೂ. ಮಾಲನ್ನು ಅಮಾನತುಪಡಿಸಿಕೊಳ್ಳಲಾಗಿದೆ.
ಸಿಪಿಐ ಲಕ್ಷ್ಮೀಪತಿ ಆರ್.ಎಲ್, ಪಿಎಸ್‌ಐಗಳಾದ ರಮೇಶ, ಮಂಜುನಾಥ ಎಸ್ ಕುರಿ, ಕೃಷ ನಾಯ್ಕ ಹಾಗೂ ಸಿಬ್ಬಂದಿಗಳಾದ ಸಿ.ಹೆಚ್.ಸಿ ಅಣ್ಣಪ್ಪ, ಪ್ರಕಾಶ ನಾಯ್ಕ ಪ್ರಸನ್ನ, ಸವಿತ ಮತ್ತು ಸಿ.ಪಿ.ಸಿ ವಿಶ್ವನಾಥ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ಪತ್ತೆಗೆ ರಚಿಸಲಾಗಿತ್ತು.